ADVERTISEMENT

ಪ್ರಸಾರ ಭಾರತಿ– ರೇಡಿಯೊ ಮಲೇಷ್ಯಾ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2023, 15:52 IST
Last Updated 27 ಡಿಸೆಂಬರ್ 2023, 15:52 IST
ಪ್ರಸಾರ ಭಾರತಿ
ಪ್ರಸಾರ ಭಾರತಿ   

ನವದೆಹಲಿ: ರೇಡಿಯೊ ಮತ್ತು ಟೆಲಿವಿಷನ್‌ ಪ್ರಸಾರ ಕ್ಷೇತ್ರದಲ್ಲಿನ ಸಹಕಾರವನ್ನು ಇನ್ನಷ್ಟು ವೃದ್ಧಿಸುವ ನಿಟ್ಟಿನಲ್ಲಿ ‘ಪ್ರಸಾರ ಭಾರತಿ’ಯು ಮಲೇಷ್ಯಾದ ಸರ್ಕಾರಿ ಸ್ವಾಮ್ಯದ ‘ರೇಡಿಯೊ ಟೆಲಿವಿಷನ್‌ ಮಲೇಷ್ಯಾ’ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಲಾಯಿತು. ಪ್ರಸಾರ, ಸುದ್ದಿಗಳು ಹಾಗೂ ಧ್ವನಿ ಮತ್ತು ದೃಶ್ಯ ಕಾರ್ಯಕ್ರಮಗಳ ವಿನಿಮಯ ಮತ್ತು ಈ ಕ್ಷೇತ್ರದಲ್ಲಿನ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ನವೆಂಬರ್ 7 ರಂದು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

‘ಪ್ರಸಾರ ಭಾರತಿಯು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಶ ಹಾಗೂ ವಿದೇಶಗಳಲ್ಲಿ ಎಲ್ಲರಿಗೂ ಅರ್ಥಪೂರ್ಣ ಮತ್ತು ನಿಖರ ಮಾಹಿತಿ ಒದಗಿಸುವುದರತ್ತ ಗಮನ ಹರಿಸಿದೆ’ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಸಾರ ಭಾರತಿಯು ಒಟ್ಟು 46 ರಾಷ್ಟ್ರಗಳ ಜತೆ ಇಂತಹ ಒಪ್ಪಂದ ಮಾಡಿಕೊಂಡಿದೆ.

ಆಕ್ಲೆಂಡ್‌ನಲ್ಲಿ ಕಾನ್ಸುಲೇಟ್‌ ಕಚೇರಿ:   ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಭಾರತವು ಶೀಘ್ರವೇ ಕಾನ್ಸುಲೇಟ್‌ ಜನರಲ್‌ ಕಚೇರಿ ಆರಂಭಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಈ ಕಚೇರಿಯು ವರ್ಷದೊಳಗೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಆಕ್ಲೆಂಡ್‌ನಲ್ಲಿ ಈಗ ಕಾನ್ಸುಲೇಟ್‌ ಕಚೇರಿ ಇದ್ದು ಗೌರವ ಕೌನ್ಸಲರು ಇದಕ್ಕೆ ಮುಖ್ಯಸ್ಥರಾಗಿರುತ್ತಾರೆ. ಕಾನ್ಸುಲೇಟ್‌ ಜನರಲ್‌ ಕಚೇರಿ ಆರಂಭವಾದರೆ ಕಾನ್ಸುಲೇಟ್‌ ಜನರಲ್‌ ಆಗಿ ಭಾರತೀಯ ವಿದೇಶಾಂಗ ಸೇವೆಯ (ಐಎಫ್‌ಎಸ್‌) ಅಧಿಕಾರಿಯನ್ನು ಸಾಮಾನ್ಯವಾಗಿ ನೇಮಿಸಲಾಗುತ್ತದೆ.

ವಲಸೆ ಪ್ರಕ್ರಿಯೆ‌ ಒಪ್ಪಂದ: ಇಟಲಿಯೊಂದಿಗೆ ವಲಸೆ ಪ್ರಕ್ರಿಯೆ ಒಪ್ಪಂದಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್‌ ಮತ್ತು ಇಟಲಿಯ ವಿದೇಶಾಂಗ ಸಚಿವ ಆಂಟನಿಯೊ ತಜಾನಿ ಸಹಿ ಮಾಡಿದ್ದು ಇದಕ್ಕೆ ಕೂಟ ಒಪ್ಪಿಗೆ ನೀಡಲಾಯಿತು.

ಭಾರತದ ವಿದ್ಯಾರ್ಥಿಗಳು ಇಟಲಿಯಲ್ಲಿ ವಿದ್ಯಾಭ್ಯಾಸ ಮುಗಿದ ಬಳಿಕ ಒಂದು ವರ್ಷದವರೆಗೆ ನೆಲೆಸಿ ವೃತ್ತಿಪರ ಅನುಭವವನ್ನು ಪಡೆಯಲು ಈ ಒಪ್ಪಂದ ಅನುವು ಮಾಡಿಕೊಡುತ್ತದೆ.

ಗಂಗಾ ನದಿ ಮೇಲೆ ಹೊಸ ಸೇತುವೆ: ಬಿಹಾರದಲ್ಲಿ ಗಂಗಾ ನದಿ ಮೇಲೆ ಷಟ್ಪಥದ ಸೇತುವೆ ನಿರ್ಮಿಸಲು ಕೂಡ ಸಂಪುಟ ಒಪ್ಪಿಗೆ ನೀಡಿದೆ. ಈ ಸೇತುವೆಯ ಉದ್ದ 4.56 ಕಿ.ಮೀ. ಇದ್ದು ಇದು  ದೀಘಾ ಮತ್ತು ಸೋನ್‌ಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.