ADVERTISEMENT

ಡಿಜಿಟಲ್‌ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಗೆ ಸಂಪುಟ ಅಸ್ತು

​ಪ್ರಜಾವಾಣಿ ವಾರ್ತೆ
Published 5 ಜುಲೈ 2023, 20:30 IST
Last Updated 5 ಜುಲೈ 2023, 20:30 IST
   

ನವದೆಹಲಿ: ಡಿಜಿಟಲ್‌ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಗೆ ಕೇಂದ್ರ ಸಚಿವ ಸಂ‍ಪುಟವು ಬುಧವಾರ ಅನುಮೋದನೆ ನೀಡಿದ್ದು,‌ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಇದನ್ನು ಮಂಡಿಸುವ ನಿರೀಕ್ಷೆ ಇದೆ.   

ಈ ವಿಷಯದ ಕುರಿತು ಸಂಪುಟ ಸಭೆಯ ನಂತರ ಸಚಿವರು ಅಧಿಕೃತ ಮಾಹಿತಿ ನೀಡದಿದ್ದರೂ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಮಸೂದೆಗೆ ಸಂಪುಟದಲ್ಲಿ ಅನುಮೋದನೆ ಸಿಕ್ಕಿರುವುದನ್ನು ಮಾಧ್ಯಮಗಳಿಗೆ ದೃಢಪಡಿಸಿದರು.

ಭಾರತದಲ್ಲಿನ ಎಲ್ಲಾ ಆನ್‌ಲೈನ್ ಮತ್ತು ಆಫ್‌ಲೈನ್‌ ದತ್ತಾಂಶವು ಡಿಜಿಟಲ್‌ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ–2023ರ ವ್ಯಾಪ್ತಿಯೊಳಗೆ ಬರಲಿದೆ ಎಂದು ಮತ್ತೊಂದು ಅಧಿಕೃತ ಮೂಲ ‘ಪ್ರಜಾವಾಣಿ’ಗೆ ಖಚಿತಪಡಿಸಿದೆ. 

ADVERTISEMENT

ಒಬ್ಬ ವ್ಯಕ್ತಿಯು ಒಪ್ಪಿಗೆ ನೀಡಿದರೆ ಮಾತ್ರ, ಈ ಮಸೂದೆಯ ಅಡಿಯಲ್ಲಿ ವೈಯಕ್ತಿಕ ದತ್ತಾಂಶ ಸಂರಕ್ಷಣೆಯನ್ನು ಪ್ರಕ್ರಿಯೆಗೊಳಿಸಬಹುದು. ರಾಷ್ಟ್ರೀಯ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆಯ ಆಧಾರದ ಮೇಲೆ ಅಧಿಕಾರಿಗಳಿಗೆ ದತ್ತಾಂಶ  ಅಗತ್ಯವಿರುವಾಗ ಕೆಲವು ವಿನಾಯಿತಿಗಳಿವೆ ಎಂದೂ ಮೂಲಗಳು ಹೇಳಿವೆ.

‘ಮಸೂದೆಯಲ್ಲಿನ ನಿಯಮಗಳ ಉಲ್ಲಂಘನೆಯ ಪ್ರತಿ ನಿದರ್ಶನಕ್ಕೂ ಸಂಬಂಧಿಸಿದ ಘಟಕಗಳ ಮೇಲೆ ₹250 ಕೋಟಿವರೆಗೆ ದಂಡ ವಿಧಿಸಲು ಮಸೂದೆ ಅನುವು ಮಾಡಿಕೊಡಲಿದೆ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಹೊರಡಿಸಿದ್ದ ಕೊನೆಯ ಕರಡಿನ ಬಹುತೇಕ ಎಲ್ಲ ನಿಬಂಧನೆಗಳನ್ನು ಈ ಮಸೂದೆ ಒಳಗೊಂಡಿದೆ’ ಎಂದು ಮೂಲಗಳು ಹೇಳಿವೆ.

ಪ್ರಸ್ತಾವಿತ ಕಾನೂನಿನ ಅಡಿಯಲ್ಲಿ ಸರ್ಕಾರದ ಇಲಾಖೆಗಳು, ಸಂಸ್ಥೆಗಳಿಗೆ ನಿಬಂಧನೆಗಳಿಂದ ವಿನಾಯಿತಿ ನೀಡಲಾಗಿಲ್ಲ. ಕಾನೂನು ಜಾರಿಗೆ ಬಂದ ನಂತರ ವ್ಯಕ್ತಿಗಳು ತಮ್ಮ ದತ್ತಾಂಶ ಸಂಗ್ರಹ, ಸಂರಕ್ಷಣೆಯ ಬಗ್ಗೆ ವಿವರಗಳನ್ನು ಪಡೆಯುವ ಹಕ್ಕು ಹೊಂದಿರುತ್ತಾರೆ. ವಿವಾದಗಳು ಉಂಟಾದ ಸಂದರ್ಭದಲ್ಲಿ, ಅದನ್ನು ದತ್ತಾಂಶ ಸಂರಕ್ಷಣಾ ಮಂಡಳಿಯು ನಿರ್ಧರಿಸುತ್ತದೆ. ನಾಗರಿಕರು ಸಿವಿಲ್ ನ್ಯಾಯಾಲಯದ ಮೊರೆ ಹೋಗಿ, ಪರಿಹಾರ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ’ ಮೂಲಗಳು ತಿಳಿಸಿವೆ.

ಸಂಸತ್ತಿನ ಮುಂಗಾರು ಅಧಿವೇಶನ ಜುಲೈ 20ರಿಂದ ಶುರುವಾಗಲಿದ್ದು, ಆಗಸ್ಟ್‌ 11ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.