ADVERTISEMENT

ಶಿಕ್ಷಣದ ಸ್ವರೂಪ ಬದಲಿಸುವ ನೀತಿ; 5ನೇ ತರಗತಿ ವರೆಗೆ ಮಾತೃ ಭಾಷೆಯಲ್ಲೇ ಶಿಕ್ಷಣ

ಏಜೆನ್ಸೀಸ್
Published 30 ಜುಲೈ 2020, 5:39 IST
Last Updated 30 ಜುಲೈ 2020, 5:39 IST
ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌
ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌    

ನವದೆಹಲಿ: ಕನಿಷ್ಠ ಪಕ್ಷ ಐದನೇ ತರಗತಿಯವರೆಗೆ ಮಾತೃಭಾಷೆ ಅಥವಾ ಸ್ಥಳೀಯ ಭಾಷೆಯಲ್ಲಿ ಕಲಿಕೆಗೆ ಒತ್ತು ನೀಡುವ ಹೊಸ ಶಿಕ್ಷಣ ನೀತಿಗೆ ಕೇಂದ್ರ ಸರ್ಕಾರವು ಬುಧವಾರ ಒಪ್ಪಿಗೆ ನೀಡಿದೆ. ಶಾಲಾಪೂರ್ವ ಕಲಿಕೆಯಿಂದ ಪ್ರೌಢಶಿಕ್ಷಣದವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಖಾತರಿ ಈ ನೀತಿಯಲ್ಲಿ ಇರುವ ಇನ್ನೊಂದು ಅಂಶ. ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 6ರಷ್ಟನ್ನು ಶಿಕ್ಷಣಕ್ಕೆ ವ್ಯಯ ಮಾಡಬೇಕು ಎಂಬ ಅಂಶವೂ ನೀತಿಯಲ್ಲಿ ಸೇರಿದೆ.

34 ವರ್ಷಗಳ ಬಳಿಕ ಹೊಸ ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಸರ್ಕಾರವು ಅನುಮೋದಿಸಿದೆ.

ಎಂಟನೇ ತರಗತಿವರೆಗೂ ಶಿಕ್ಷಣದ ಮಾಧ್ಯಮವು ಮಾತೃಭಾಷೆ ಅಥವಾ ಸ್ಥಳೀಯ ಭಾಷೆ ಅಥವಾ ರಾಜ್ಯ ಭಾಷೆ ಆಗಿರಬೇಕು ಎಂಬುದಕ್ಕೆ ನೀತಿಯು ಆದ್ಯತೆ ನೀಡಿದೆ. ಶಾಲೆ ಮತ್ತು ಪ್ರೌಢ ಶಿಕ್ಷಣದ ಎಲ್ಲ ಹಂತಗಳಲ್ಲಿಯೂ ಸಂಸ್ಕೃತವನ್ನು ಐಚ್ಛಿಕವಾಗಿ ಕಲಿಯುವ ಅವಕಾಶ ನೀಡಲಾಗಿದೆ.

ADVERTISEMENT

‘ಭಾರತದ ಇತರ ಶಾಸ್ತ್ರೀಯ ಭಾಷೆಗಳು ಮತ್ತು ಸಾಹಿತ್ಯವನ್ನು ಕೂಡ ಐಚ್ಛಿಕವಾಗಿ ಕಲಿಯಲು ಅವಕಾಶ ಇದೆ. ಯಾವುದೇ ವಿದ್ಯಾರ್ಥಿಯ ಮೇಲೆ ಯಾವುದೇ ಭಾಷೆಯನ್ನು ಹೇರುವುದಿಲ್ಲ’ ಎಂದು ನೀತಿಯು ಅತ್ಯಂತ ಸ್ಪಷ್ಟವಾಗಿ ಹೇಳಿದೆ.

ಶಿಕ್ಷಕರಿಗೆ ನಾಲ್ಕು ವರ್ಷಗಳ ಸಂಯೋಜಿತ ಪದವಿ ಕನಿಷ್ಠ ವಿದ್ಯಾರ್ಹತೆಯಾಗಲಿದೆ. ಇದು 2030ರ ಹೊತ್ತಿಗೆ ಜಾರಿಗೆ ಬರಲಿದೆ.

ಉನ್ನತ ಶಿಕ್ಷಣದಲ್ಲಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗಿದೆ. ಮೇಜರ್‌ ಮತ್ತು ಮೈನರ್‌ ವಿಷಯಗಳಾಗಿ ತಮ್ಮ ಆಯ್ಕೆಯ ವಿಷಯಗಳ ಸಂಯೋಜನೆಯನ್ನು ಕಲಿಯಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಲಿದೆ.

‘ಭೌತವಿಜ್ಞಾನ ಅಥವಾ ಎಂಜಿನಿಯರಿಂಗ್‌ ಕಲಿಯುವ ಹಲವು ವಿದ್ಯಾರ್ಥಿಗಳಿಗೆ ಸಂಗೀತದಲ್ಲಿ ಆಸಕ್ತಿ ಇರಬಹುದು. ಈಗ ಅವರು ಎಂಜಿನಿಯರಿಂಗ್‌ ಜತೆಗೆ ಸಂಗೀತವನ್ನೂ ಒಂದು ವಿಷಯವಾಗಿ ಕಲಿಯಬಹುದು’ ಎಂದು ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅಮಿತ್‌ ಖರೆ ಹೇಳಿದ್ದಾರೆ.

ಮೂರರಿಂದ ನಾಲ್ಕು ವರ್ಷಗಳ ಪದವಿ ಪೂರ್ವ ಹಂತದ ಶಿಕ್ಷಣವನ್ನು ಯೋಜಿಸಲಾಗಿದ್ದು ವಿವಿಧ ಹಂತಗಳಲ್ಲಿ ಈ ಕೋರ್ಸ್‌ಗಳನ್ನು ನಿಲ್ಲಿಸುವ ಅವಕಾಶ ವಿದ್ಯಾರ್ಥಿಗಳಿಗೆಲಭ್ಯವಾಗಲಿದೆ.

ವಿದ್ಯಾರ್ಥಿಗಳು ಯಾವ ಹಂತವನ್ನೂ ಪೂರ್ಣಗೊಳಿಸಿದ್ದಾರೆಯೋ ಆ ಹಂತಕ್ಕೆ ಅವರಿಗೆ ಪ್ರಮಾಣಪತ್ರವೂ ದೊರೆಯಲಿದೆ. ಮೊದಲ ವರ್ಷ ಪೂರ್ಣಗೊಳಿಸಿದರೆ ಶಿಕ್ಷಣ ನಿಲ್ಲಿಸುವ ವಿದ್ಯಾರ್ಥಿಗೆ ಪ್ರಮಾಣಪತ್ರ ಸಿಗಲಿದೆ. ಎರಡು ವರ್ಷ ಪೂರ್ಣಗೊಳಿಸಿದರೆ ಡಿಪ್ಲೊಮಾ ಪ್ರಮಾಣಪತ್ರ, ಮೂರು ವರ್ಷ ಪೂರ್ಣಗೊಳಿಸಿದರೆ ಪದವಿ ಮತ್ತು ನಾಲ್ಕು ವರ್ಷ ಪೂರ್ಣಗೊಳಿಸಿದರೆ ಸಂಶೋಧನೆಯೊಂದಿಗೆ ಪದವಿ ಪ್ರಮಾಣಪತ್ರ ಸಿಗಲಿದೆ.

ಮಧ್ಯದಲ್ಲಿ ಶಿಕ್ಷಣ ನಿಲ್ಲಿಸಿದ ವಿದ್ಯಾರ್ಥಿಯು ಮತ್ತೆ ಕೋರ್ಸ್‌ ಮುಂದುವರಿಸಲು ಅವಕಾಶ ಇದೆ. ಇದಕ್ಕೆ ನಿಗದಿತ ಅವಧಿಯ ಮಿತಿ ಇರುತ್ತದೆ. ಮುಂದಿನ 15 ವರ್ಷಗಳಲ್ಲಿ ಕಾಲೇಜುಗಳು ವಿ.ವಿ.ಅಧೀನದಿಂದ ಹೊರಗೆ ಬಂದು ಸ್ವಾಯತ್ತವಾಗಲಿವೆ ಅಥವಾ ವಿ.ವಿ. ಘಟಕ ಕಾಲೇಜು ಎಂದು ಗುರುತಿಸಿಕೊಳ್ಳಲಿವೆ. ಇವುಗಳು ಸಂಶೋಧನಾ ವಿ.ವಿ.ಗಳು, ಬೋಧನಾ ವಿ.ವಿ.ಗಳು, ಪದವಿ ಪ್ರದಾನ ಮಾಡುವ ಕಾಲೇಜು ಎಂದು ಗುರುತಿಸಿಕೊಳ್ಳಲಿವೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಏನೆಲ್ಲ ಇದೆ?

* ಮಕ್ಕಳಿಗೆ 5ನೇ ತರಗತಿಯ ವರೆಗೂ ಮಾತೃ ಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ನೀಡಬೇಕು.

* ಉನ್ನತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳ ಪ್ರವೇಶಕ್ಕೆ ಏಕ ರೂಪ (ಸಾಮಾನ್ಯ) ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ.

* ಖಾಸಗಿ ಮತ್ತು ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಒಂದೇ ರೀತಿಯ ನಿಯಮಗಳು ಅನ್ವಯವಾಗಲಿವೆ.

* ಎಂಫಿಲ್‌ ಕೋರ್ಸ್‌ಗಳ ಮುಂದುವರಿಕೆ ಇಲ್ಲ.

* ಕಲಿಕೆಯನ್ನು ಅನ್ವಯಿಸುವುದರ ಆಧಾರದ ಮೇಲೆ ಬೋರ್ಡ್‌ ಎಕ್ಸಾಮ್‌ಗಳು.

* ಪ್ರಾದೇಶಿಕ ಭಾಷೆಗಳಲ್ಲಿ ಇ–ಕೋರ್ಸ್‌ಗಳ ಅಭಿವೃದ್ಧಿ ಪಡಿಸಲಾಗುತ್ತದೆ. ವರ್ಚುವಲ್‌ ಲ್ಯಾಬ್‌ಗಳು, ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆ (ಎನ್‌ಇಟಿಎಫ್‌) ರೂಪಿಸಲಾಗುತ್ತದೆ.

* 2035ರ ವೇಳೆಗೆ ಶೇ 50ರಷ್ಟು ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗುವಂತೆ ಮಾಡುವ ಗುರಿ.

* ಎಲ್ಲ ಉನ್ನತ ಶಿಕ್ಷಣಗಳಿಗೆ ಒಂದೇ ನಿಯಂತ್ರಣ ಸಂಸ್ಥೆ ಇರಲಿದೆ.

* ಶೈಕ್ಷಣಿಕ, ಆಡಳಿತ ಹಾಗೂ ಹಣಕಾಸು ಸ್ವಾಯತ್ತತೆಯನ್ನು ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುತ್ತದೆ. ದೇಶದಲ್ಲಿ ಸುಮಾರು 45,000 ಕಾಲೇಜುಗಳಿಗೆ.

* ಪ್ರಸ್ತುತ ಡೀಮ್ಡ್‌ ಯೂನಿವರ್ಸಿಟಿಗಳು, ಸೆಂಟ್ರಲ್‌ ಯೂನಿವರ್ಸಿಟಿಗಳು, ಪ್ರತ್ಯೇಕ ಸಂಸ್ಥೆಗಳಿಗೆ ಪ್ರತ್ಯೇಕ ನಿಯಮಾವಳಿಗಳಿವೆ. ಹೊಸ ಶಿಕ್ಷಣ ನೀತಿಯ ಅನ್ವಯ, ಗುಣಮಟ್ಟದ ಕಾರಣಗಳಿಂದ ಎಲ್ಲ ಸಂಸ್ಥೆಗಳಿಗೂ ಒಂದೇ ರೀತಿಯ ನಿಯಮಗಳು ಅನ್ವಯವಾಗಲಿದೆ.

* ವಿದ್ಯಾರ್ಥಿಗಳ ಪ್ರಗತಿ ಪತ್ರಗಳಲ್ಲಿ ಕೇವಲ ಅಂಕಗಳು ಹಾಗೂ ಟಿಪ್ಪಣಿಗಳ ಬದಲು ಕೌಶಲ ಹಾಗೂ ಅರ್ಹತೆಗಳ ಸಮಗ್ರಿ ವರದಿ ನೀಡಲಾಗುತ್ತದೆ.

* ವೃತ್ತಿ ಆಧಾರಿತ ವಿಷಯಗಳು 6ನೇ ತರಗತಿಗಳ ಪಠ್ಯದೊಂದಿಗೆ ಸಂಯೋಜಿಸಲಾಗುತ್ತದೆ. ಕಲೆ ಮತ್ತು ವಿಜ್ಞಾನದ ರೀತಿ ಪ್ರತ್ಯೇಕಗೊಳಿಸಿದ ಶಿಕ್ಷಣ ವ್ಯವಸ್ಥೆ ಇರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.