ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ನೌಕಾಪಡೆಗಾಗಿ ₹ 19 ಸಾವಿರ ಕೋಟಿ ವೆಚ್ಚದಲ್ಲಿ 200ಕ್ಕೂ ಹೆಚ್ಚು ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಗಳು ಹಾಗೂ ಸಂಬಂಧಿಸಿದ ಸಾಧನಗಳನ್ನು ಖರೀದಿ ಮಾಡಲು ಭದ್ರತೆ ಕುರಿತ ಸಂಪುಟ ಸಮಿತಿ ಒಪ್ಪಿಗೆ ನೀಡಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ವಿವಿಧ ಯುದ್ಧನೌಕೆಗಳಲ್ಲಿ ಈ ಕ್ಷಿಪಣಿಗಳನ್ನು ನಿಯೋಜನೆ ಮಾಡುವ ಮೂಲಕ ನೌಕಾಪಡೆಯ ದಾಳಿ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದೂ ಹೇಳಿವೆ.
ಖರೀದಿ ಮಾಡಲು ಉದ್ದೇಶಿಸಲಾಗಿರುವ ಬ್ರಹ್ಮೋಸ್ ಕ್ಷಿಪಣಿಗಳು ವಿವಿಧ ವ್ಯಾಪ್ತಿಯನ್ನು ಹೊಂದಿವೆ. ಕೆಲ ಕ್ಷಿಪಣಿಗಳು 290 ಕಿ.ಮೀ. ವ್ಯಾಪ್ತಿ ವರೆಗಿನ ಗುರಿಗಳನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿದ್ದರೆ, ಇನ್ನೂ ಕೆಲವು ಕ್ಷಿಪಣಿಗಳ ಸಾಮರ್ಥ್ಯ 450 ಕಿ.ಮೀ. ವ್ಯಾಪ್ತಿಯಷ್ಟಿದೆ ಎಂದು ಮೂಲಗಳು ಹೇಳಿವೆ.
ಭಾರತ ಮತ್ತು ರಷ್ಯಾ ಸಹಭಾಗಿತ್ವದ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಈ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಉತ್ಪಾದಿಸಲಿದೆ. ಇವುಗಳನ್ನು ಜಲಾಂತರ್ಗಾಮಿಗಳು, ಯುದ್ಧನೌಕೆಗಳು ಹಾಗೂ ಯುದ್ಧವಿಮಾನಗಳಿಂದ ಉಡಾವಣೆ ಮಾಡಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.