ಕೋಲ್ಕತ್ತ (ಪಿಟಿಐ): ‘ನಾರದಾ ಸ್ಟಿಂಗ್ ಆಪರೇಷನ್ ಟೇಪ್’ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಸ್ಪೀಕರ್ ಅನುಮತಿ ಪಡೆಯದೇ ಶಾಸಕರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿರುವ ಸಿಬಿಐ ಅಧಿಕಾರಿಗಳಿಗೆ ಸ್ಪೀಕರ್ ಎದುರು ಹಾಜರಾಗುವಂತೆ ಕಲ್ಕತ್ತಾ ಹೈಕೋರ್ಟ್ ಸೋಮವಾರ ಸೂಚನೆ ನೀಡಿದೆ.
ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರು ನೀಡಿರುವ ನೋಟಿಸ್ ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ರಾಜಶೇಖರ್ ಮಂಥಾ ಅವರು ಮಂಗಳವಾರಕ್ಕೆ ನಿಗದಿಪಡಿಸಿದ್ದಾರೆ.
ನ್ಯಾಯಾಧೀಶ ಮಂಥಾ ಅವರು, ಸ್ಪೀಕರ್ ಎದುರು ಹಾಜರಾಗುವವರೆಗೆ ಹೈಕೋರ್ಟ್‌ನಲ್ಲಿ ಬಾಕಿ ಇರುವ ಅರ್ಜಿಯ ವಿಚಾರಣೆ ಮುಂದೂಡುವಂತೆ ಸಿಬಿಐ ಅಧಿಕಾರಿಗಳು ಸಲ್ಲಿಸಿದ್ದ ಕೋರಿಕೆಯನ್ನು ಪರಿಗಣಿಸಿದರು.
ಪಶ್ಚಿಮ ಬಂಗಾಳದ ಶಾಸಕರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸುವ ಮುನ್ನ ತಮ್ಮ ಕಚೇರಿಯಿಂದ ಏಕೆ ಅನುಮತಿ ಪಡೆದುಕೊಂಡಿಲ್ಲ ಎಂದು ವಿವರಣೆ ನೀಡುವಂತೆ ಸ್ಪೀಕರ್ ಇತ್ತೀಚೆಗೆ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳಿಗೆ ಸಮನ್ಸ್ ನೀಡಿದ್ದಾರೆ.
‘ನಾರದಾ ಮಾರುವೇಷ ಕಾರ್ಯಾಚರಣೆ ಟೇಪ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ಸುಬ್ರತಾ ಮುಖರ್ಜಿ, ಫಿರ್ಹಾದ್ ಹಕೀಂ ಮತ್ತು ಮದನ್ ಮಿತ್ರ ಅವರನ್ನು ಸಿಬಿಐ ಬಂಧಿಸಿತ್ತು. ಈ ಮೂವರು ತೃಣಮೂಲ ಕಾಂಗ್ರೆಸ್‌ನ ಶಾಸಕರು. ಇವರಲ್ಲಿ ಮುಖರ್ಜಿ ಮತ್ತು ಹಕೀಮ್ ಮಮತಾ ಬ್ಯಾನರ್ಜಿ ಅವರ ಸಂಪುಟದಲ್ಲಿ ಸಚಿವರಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.