ಕೋಲ್ಕತ್ತ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಮತ್ತು ಭೂಕಬಳಿಕೆ ಆರೋಪಗಳ ಬಗ್ಗೆ ನಡೆಯುತ್ತಿರುವ ಸಿಬಿಐ ತನಿಖೆಯ ಪ್ರಗತಿಗೆ ಕಲ್ಕತ್ತಾ ಹೈಕೋರ್ಟ್ ಗುರುವಾರ ತೃಪ್ತಿ ವ್ಯಕ್ತಪಡಿಸಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು (ಎನ್ಎಚ್‌ಆರ್‌ಸಿ) ಈ ಪ್ರಕರಣದಲ್ಲಿ ಅರ್ಜಿದಾರರನ್ನಾಗಿ ಸೇರಿಸಲು ಹೈಕೋರ್ಟ್ ಅನುಮತಿಸಿದೆ. ಈ ಪ್ರಕರಣದಲ್ಲಿ ಎನ್ಎಚ್‌ಆರ್‌ಸಿಯ ಉಪಸ್ಥಿತಿಯಿಂದ ನ್ಯಾಯಾಲಯಕ್ಕೆ ನೆರವಾಗಲಿದೆ ಎನ್ನುವ ವಾದವನ್ನು ಅದು ಪುರಸ್ಕರಿಸಿತು.
ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ಅವರು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರೊಂದಿಗೆ ಸಿಬಿಐ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದರು. ವಿವರಗಳನ್ನು ಗೋಪ್ಯವಾಗಿಡಲು ಸಿಬಿಐ ಮಾಡಿರುವ ಮನವಿಯನ್ನೂ ಪುರಸ್ಕರಿಸಿದರು.
ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಮತ್ತು ಭೂಕಬಳಿಕೆ ಆರೋಪಗಳ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ನ್ಯಾಯಾಲಯವು ಏಪ್ರಿಲ್ 10ರಂದು ಆದೇಶಿಸಿ, ತನಿಖಾ ವರದಿಯ ಪ್ರಗತಿ ಕುರಿತು ವಿವರವನ್ನು ಗುರುವಾರ ಸಲ್ಲಿಸಲು ಸೂಚಿಸಿತ್ತು. ಮುಂದಿನ ವಿಚಾರಣೆಯನ್ನು ಜೂನ್ 13ಕ್ಕೆ ನಿಗದಿಪಡಿಸಿದ ನ್ಯಾಯಾಲಯ, ಮುಂದಿನ ತನಿಖೆಯ ಪ್ರಗತಿ ವರದಿಯನ್ನೂ ಸಲ್ಲಿಸುವಂತೆ ಸಿಬಿಐಗೆ ಸೂಚಿಸಿದೆ.
ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ನ್ಯಾಯಾಲಯವು, ಕಂದಾಯ ದಾಖಲೆಗಳ ಸಂಪೂರ್ಣ ಪರಿಶೀಲನೆ ಮತ್ತು ಭೂಪರಿವರ್ತನೆಯಾಗಿದೆ ಎಂದು ಹೇಳಲಾದ ಜಮೀನಿನ ಪರಿಶೀಲನೆಯ ನಂತರ, ಕೃಷಿ ಭೂಮಿಯನ್ನು ಅಕ್ರಮವಾಗಿ ಮೀನುಗಾರಿಕೆಗೆ ಜಲಮೂಲಗಳಾಗಿ ಪರಿವರ್ತಿಸಿರುವ ಆರೋಪದ ಬಗ್ಗೆ ತನಿಖೆ ನಡೆಸುವಂತೆಯೂ ಕೇಂದ್ರದ ಏಜೆನ್ಸಿಗೆ ಸೂಚಿಸಿದೆ.
ಭೂ ಕಬಳಿಕೆಗೆ ಸಂಬಂಧಿಸಿದ 900ಕ್ಕೂ ಹೆಚ್ಚು ಆರೋಪಗಳಿವೆ ಎಂದು ತಿಳಿಸಿದ ಸಿಬಿಐ, ತನಿಖೆಗೆ ರಾಜ್ಯ ಸರ್ಕಾರದ ಅಧಿಕಾರಿಗಳು ಸಹಕರಿಸುವಂತೆ ನ್ಯಾಯಾಲಯದ ನಿರ್ದೇಶನ ಕೋರಿದ್ದು, ಇದಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ನ್ಯಾಯಮೂರ್ತಿಗಳು ನಿರ್ದೇಶನ ನೀಡಿದರು.
ಸಂದೇಶ್‌ಖಾಲಿಯಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿ ಹೈಕೋರ್ಟ್ ಸ್ವಯಂಪ್ರೇರಿತ ಅರ್ಜಿ ಮತ್ತು ಇತರ ಪಿಐಎಲ್‌ಗಳನ್ನು ವಿಚಾರಣೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.