ADVERTISEMENT

ಬಂಗಾಳ ವೈದ್ಯಕೀಯ ಕಾಲೇಜುಗಳಲ್ಲಿ ಅವ್ಯವಸ್ಥೆ: ಹೈಕೋರ್ಟ್‌ಗೆ ಪಿಐಎಲ್‌ ಸಲ್ಲಿಕೆ

ಪಿಟಿಐ
Published 27 ಸೆಪ್ಟೆಂಬರ್ 2024, 16:10 IST
Last Updated 27 ಸೆಪ್ಟೆಂಬರ್ 2024, 16:10 IST
   

ಕೋಲ್ಕತ್ತ: ಪಶ್ಚಿಮ ಬಂಗಾಳದ ವೈದ್ಯಕೀಯ ಕಾಲೇಜುಗಳಲ್ಲಿ ಬೆದರಿಕೆ, ಭ್ರಷ್ಟಾಚಾರ, ಕಿರುಕುಳ ಸೇರಿದಂತೆ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ (ಪಿಐಎಲ್‌) ಯಾವುದಾದರೂ ಒಂದೂ ಅಥವಾ ಅದಕ್ಕೂ ಹೆಚ್ಚು ಆರೋಪಗಳು ಸರಿಯಾಗಿದ್ದರೆ ಬಹಳ ಗಂಭೀರ ವಿಷಯವಾಗುತ್ತದೆ ಎಂದು ಕಲ್ಕತ್ತ ಹೈಕೋರ್ಟ್‌ ಶುಕ್ರವಾರ ಎಚ್ಚರಿಸಿದೆ.

ಅರ್ಜಿಯಲ್ಲಿ ಉಲ್ಲೇಖಿಸಿರುವ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಮಾಣಪತ್ರ ಸಲ್ಲಿಸುವಂತೆ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ರಾಜ್ಯ ಸರ್ಕಾರ ನಡೆಸುತ್ತಿರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಬೆದರಿಕೆ ಸಂಸ್ಕೃತಿ ಇದೆ. ಇಲ್ಲಿ ಕೀ–ಉತ್ತರಗಳನ್ನು ಮಾರಿಕೊಳ್ಳಲಾಗುತ್ತಿದೆ. ಲಂಚಗುಳಿತನ, ಭ್ರಷ್ಟಾಚಾರ, ಲೈಂಗಿಕ ಶೋಷಣೆ, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಕಿರಿಯ ವೈದ್ಯರ ಮೇಲಿನ ದೌರ್ಜನ್ಯ ವ್ಯಾಪಕವಾಗಿದೆ ಎಂದು ಅರ್ಜಿದಾರರು ಉಲ್ಲೇಖಿಸಿದ್ದಾರೆ.

ADVERTISEMENT

ಈ ಆರೋಪಗಳ ಕುರಿತು ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸುವಂತೆ ಅರ್ಜಿದಾರರು ಕೋರಿದ್ದಾರೆ.

ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಶಿವಜ್ಞಾನಂ ಅವರ ನೇತೃತ್ವದ ವಿಭಾಗೀಯ ಪೀಠವು, ಸರ್ಕಾರಕ್ಕೆ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿ, ವಿಚಾರಣೆಯನ್ನು ನವೆಂಬರ್‌ 21ಕ್ಕೆ ಮುಂದೂಡಿತು. 

‘ಘೋಷ್‌ ವಿರುದ್ಧದ ಆರೋಪ ಸಾಭೀತಾದರೆ ಗಲ್ಲು ಶಿಕ್ಷೆ’

ಕೋಲ್ಕತ್ತ: ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಅವರಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ ಅವರ ವಿರುದ್ಧ ಗಂಭೀರ ಸ್ವರೂಪದ ಆರೋಪಗಿದ್ದು ಸಾಬೀತಾದರೆ ಗಲ್ಲು ಶಿಕ್ಷೆ ವಿಧಿಸಬಹುದು ಎಂದು ಹೇಳಿದೆ. ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸುವಲ್ಲಿ ವಿಳಂಬ ಮತ್ತು ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಆಗಸ್ಟ್‌ 9ರಂದು ಘೋಷ್‌ ಮತ್ತು ತಾಲಾ ಪೊಲೀಸ್‌ ಠಾಣೆಯ ಉಸ್ತುವಾರಿ ಅಭಿಜಿತ್‌ ಮಂಡಲ್‌ ಅವರನ್ನು ಸಿಬಿಐ ಬಂಧಿಸಿತ್ತು. ಇದೇ ವೇಳೆ ನ್ಯಾಯಾಲಯ ಅಭಿಜಿತ್‌ ಮಂಡಲ್‌ ಅವರಿಗೂ ಜಾಮೀನು ನೀಡಲು ನಿರಾಕರಿಸಿತು. ಸಿಬಿಐ ಮನವಿ ಆಧರಿಸಿ ಇಬ್ಬರೂ ಆರೋಪಿಗಳಿಗೆ ಇದೇ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ ಹೆಚ್ಚುವರಿ ಮುಖ್ಯ ನ್ಯಾಯಾಧೀಶ ಎಸ್‌. ಡೇ ಆದೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.