ಪಾಟ್ನಾ: ‘ಪರಸ್ಪರ ದೂರವಾದ ನಂತರ ಸಂಗಾತಿಗೆ ‘ಭೂತ, ಪಿಶಾಚಿ’ ಎಂದು ಕೀಳು ಭಾಷೆ ಬಳಸುವುದು ಕಿರುಕುಳಕ್ಕೆ ಸಮನಾದುದಲ್ಲ’ ಎಂದು ಪಾಟ್ನಾ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮಹಿಳೆಯೊಬ್ಬರು ತನ್ನ ವಿಚ್ಛೇಧಿತ ಪತಿ ನರೇಶ್ ಕುಮಾರ್ ಗುಪ್ತಾ ಹಾಗೂ ಅವರ ತಂದೆ ಸಹದೇವ್ ಗುಪ್ತಾ ವಿರುದ್ಧ ಇಂಥ ಕೀಳು ಭಾಷೆ ಬಳಸಿದ್ದರ ಕುರಿತು 1994ರಲ್ಲಿ ದೂರು ದಾಖಲಿಸಿದ್ದರು. ವರದಕ್ಷಿಣೆ ರೂಪದಲ್ಲಿ ಕಾರು ನೀಡದ್ದಕ್ಕೆ ದೈಹಿಕ ಹಿಂಸೆ ನೀಡುವುದರ ಜತೆಗೆ ಕೆಟ್ಟದಾಗಿ ಮಾತನಾಡಿದ್ದರು ಎಂದೂ ದೂರಿದ್ದರು. ಇವರ ವಾದವನ್ನು ಆಲಿಸಿದ ಬಿಹಾರದ ನಳಂದಾ ಜಿಲ್ಲಾ ನ್ಯಾಯಾಲಯವು 2008ರಲ್ಲಿ ತಂದೆ ಹಾಗೂ ಮಗನನ್ನು ತಪ್ಪಿತಸ್ಥ ಎಂದು ಹೇಳಿತ್ತು. ಜತೆಗೆ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು.
ಇದನ್ನು ಪ್ರಶ್ನಿಸಿ ಸಹದೇವ್ ಮತ್ತು ನರೇಶ್ ಗುಪ್ತಾ ಪಾಟ್ನಾ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಪಾಟ್ನಾದ ಏಕ ಸದಸ್ಯ ಪೀಠದ ಎದುರು ಮಹಿಳೆ ಪರ ವಾದ ಮಂಡಿಸಿದ ವಕೀಲರು, ‘21ನೇ ಶತಮಾನದಲ್ಲಿ ಮಹಿಳೆಯನ್ನು ಭೂತ, ಪಿಶಾಚಿ ಎಂದು ಜರಿದಿರುವುದು ಕ್ರೌರ್ಯಕ್ಕೆ ಸಮ’ ಎಂದು ವಾದ ಮಂಡಿಸಿದರು.
ಈ ವಾದವನ್ನು ತಿರಸ್ಕರಿಸಿದ ಪೀಠ, ‘ವೈವಾಹಿಕ ಸಂಬಂಧ ಸರಿ ಇಲ್ಲದ ಸಂದರ್ಭದಲ್ಲಿ ಪತಿ ಹಾಗೂ ಪತ್ನಿ ಇಂಥ ಬೈಗುಳಗಳ ಭಾಷೆ ಬಳಸಿರುವ ಉದಾಹರಣೆಗಳು ಇವೆ. ಆದರೆ ಇಂಥ ಬೈಗುಳಗಳು ಹಾಗೂ ಕೀಳು ಭಾಷೆಗಳು ಕಿರುಕುಳ ವ್ಯಾಪ್ತಿಗೆ ಬರುವುದಿಲ್ಲ’ ಎಂದಿದೆ.
ಆರೋಪಿತರಿಂದ ಮಹಿಳೆಯು ದೌರ್ಜನ್ಯಕ್ಕೆ ಹಾಗೂ ಕ್ರೂರವಾದ ಹಿಂಸೆಗೆ ಒಳಗಾಗಿದ್ದಾರೆ ಎಂದು ಅರ್ಜಿಯಲ್ಲಿ ನಿರ್ದಿಷ್ಟವಾದ ಆರೋಪಗಳನ್ನು ಮಾಡಿಲ್ಲ ಎಂದಿರುವ ಹೈಕೋರ್ಟ್ ಪೀಠವು, ಕೆಳ ಹಂತದ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.