ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಕೊನೆಯ ಹಂತದಲ್ಲಿ ಮತದಾನ ನಡೆಯಲಿರುವ ಒಂಬತ್ತು ಲೋಕಸಬಾ ಕ್ಷೇತ್ರಗಳ ಬಹಿರಂಗ ಪ್ರಚಾರವನ್ನು ಗುರುವಾರ ರಾತ್ರಿ 10 ಗಂಟೆಗೆ ಕೊನೆಗೊಳಿಸಬೇಕು ಎಂದು ಚುನಾವಣಾ ಆಯೋಗ ಆದೇಶ ನೀಡಿದೆ. ಬಹಿರಂಗ ಪ್ರಚಾರದ ಅವಧಿಯನ್ನು ಒಂದು ದಿನ ಕಡಿತಗೊಳಿಸಲಾಗಿದೆ.ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಕೋಲ್ಕತ್ತದಲ್ಲಿ ಮಂಗಳವಾರ ರೋಡ್ ಷೋ ನಡೆಸಿದ್ದರು. ಆ ಸಂದರ್ಭದಲ್ಲಿ ನಡೆದ ಗಲಭೆಯ ಕಾರಣಕ್ಕೆ ಆಯೋಗವು ಈ ನಿರ್ಧಾರ ಕೈಗೊಂಡಿದೆ.
ಇದೇ 19ರಂದು ಇಲ್ಲಿ ಮತದಾನ ನಡೆಯಲಿದೆ. ಸಾಮಾನ್ಯವಾಗಿ ಮತದಾನಕ್ಕೆ 48 ಗಂಟೆ ಇರುವಂತೆ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತದೆ. ಅದರ ಪ್ರಕಾರ ಈ 9 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಶುಕ್ರವಾರ ಸಂಜೆ ಅಂತ್ಯವಾಗಬೇಕಿತ್ತು. ಆದರೆ ಗಲಭೆ ಸಂಭವಿಸಿದ ಕಾರಣಕ್ಕೆ ಗುರುವಾರ (ಮೇ 16) ರಾತ್ರಿ 10 ಗಂಟೆಯ ನಂತರ ಬಹಿರಂಗ ಪ್ರಚಾರ ನಡೆಸಬಾರದು ಎಂದು ಆಯೋಗ ಸೂಚಿಸಿದೆ.
ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಸಿಐಡಿಯ ಹೆಚ್ಚುವರಿ ಮಹಾ ನಿರ್ದೇಶಕರನ್ನು ಅವರ ಹುದ್ದೆಯಿಂದ ತೆಗೆದುಹಾಕಿರುವುದಾಗಿಯೂ ಚುನಾವಣಾ ಆಯೋಗ ತಿಳಿಸಿದೆ.
ಕೋಲ್ಕತ್ತದಲ್ಲಿ ಶಾ ಅವರ ರೋಡ್ ಷೋ ಸಂದರ್ಭದಲ್ಲಿ ಕಲ್ಲು ತೂರಾಟ ಹಾಗೂ ಆ ನಂತರ ಗಲಭೆ ನಡೆದು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರರ ಪುತ್ಥಳಿಯನ್ನೂ ಧ್ವಂಸಗೊಳಿಸಲಾಗಿತ್ತು. ಈ ಘಟನೆಗಳನ್ನು ಬಿಜೆಪಿ ಮತ್ತು ಟಿಎಂಸಿ ಖಂಡಿಸಿವೆ. ಪ್ರತಿಭಟನೆಯನ್ನೂ ನಡೆಸಿವೆ. ಪರಸ್ಪರರ ವಿರುದ್ಧ ಆರೋಪಗಳನ್ನೂ ಈ ಪಕ್ಷಗಳ ಮುಖಂಡರು ಮಾಡಿದ್ದಾರೆ.
ಮಮತಾ ಆಕ್ರೋಶ
ಚುನಾವಣಾ ಆಯೋಗದ ಕ್ರಮವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡಿಸಿದ್ದಾರೆ. ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಇಲ್ಲವೇ ಇಲ್ಲ. ಹಾಗಿದ್ದರೂ 324ನೇ ವಿಧಿಯ ಅನ್ವಯ ಆಯೋಗ ಕ್ರಮ ಕೈಗೊಂಡಿದೆ. ಈ ವಿಧಿಯು ಅಸಾಂವಿಧಾನಿಕ ಮತ್ತು ಅನೈತಿಕ ಎಂದು ಅವರು ಆರೋಪಿಸಿದ್ದಾರೆ.
ಬುಧವಾರ ನಡೆದದ್ದೇನು?
ಕೋಲ್ಕತ್ತದಲ್ಲಿ–
* ರಾತ್ರಿ 9: ಪ್ರಚಾರವನ್ನು ಗುರುವಾರವೇ ಕೊನೆಗೊಳಿಸುವ ಆಯೋಗದ ನಿರ್ಧಾರಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಂದ ಆಕ್ಷೇಪ
* ರಾತ್ರಿ 7.30: ವಿದ್ಯಾಸಾಗರರ ಪುತ್ಥಳಿ ಧ್ವಂಸವನ್ನು ಖಂಡಿಸಿ ಮಮತಾ ಅವರಿಂದ ಪ್ರತಿಭಟನೆ
* ಸಂಜೆ 6.40: ಅಮಿತ್ ಶಾ ಮೇಲೆ ನಡೆಸಿದ ದಾಳಿ ಟಿಎಂಸಿಯ ಪ್ರತೀಕಾರದ ಕ್ರಮ ಎಂದು ಉತ್ತರ 24 ಪರಗಣ ಜಿಲ್ಲೆಯಲ್ಲಿ ಆರೋಪಿಸಿದ ಪ್ರಧಾನಿ ನರೇಂದ್ರ ಮೋದಿ
* ಸಂಜೆ 4.50: ಶಾ ರೋಡ್ ಷೋ ಸಂದರ್ಭದಲ್ಲಿ ವಿದ್ಯಾಸಾಗರ ಕಾಲೇಜು ಸಮೀಪ ನಡೆದ ದಾಂದಲೆ ಬಿಜೆಪಿಯ ವ್ಯವಸ್ಥಿತ ಸಂಚು ಎಂದು ಆರೋಪಿಸಿದ ಮಮತಾ
* ಸಂಜೆ 4.40: ವಿದ್ಯಾಸಾಗರರ ಪ್ರತಿಮೆ ಧ್ವಂಸ ಮಾಡಿದ್ದು ಟಿಎಂಸಿ ಕಾರ್ಯಕರ್ತರೇ ಎಂದು ಆರೋಪಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
ದೆಹಲಿಯಲ್ಲಿ–
* ಬೆಳಿಗ್ಗೆ 11: ಅಮಿತ್ ಶಾ ಮಾಧ್ಯಮಗೋಷ್ಠಿ; ವಿದ್ಯಾಸಾಗರರ ಪುತ್ಥಳಿ ಧ್ವಂಸ ಟಿಎಂಸಿಯ ಕೃತ್ಯ ಎಂದು ಆರೋಪ
* ಮಧ್ಯಾಹ್ನ 2: ಟಿಎಂಸಿ ಮುಖಂಡರಿಂದ ವಿಡಿಯೊ ಬಿಡುಗಡೆ
* ಸಂಜೆ 4: ಟಿಎಂಸಿ ನಿಯೋಗದಿಂದ ಚುನಾವಣಾ ಆಯೋಗಕ್ಕೆ ಭೇಟಿ, ಬಿಜೆಪಿ ವಿರುದ್ಧ ದೂರು
* ರಾತ್ರಿ 7.30: ಪ್ರಚಾರಕ್ಕೆ ಕತ್ತರಿ ಹಾಕಿ ಆಯೋಗದಿಂದ ಆದೇಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.