ನವದೆಹಲಿ: ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕ ಜೀವನದಲ್ಲಿರುವ ಪ್ರಮುಖರ ಅಭಿವ್ಯಕ್ತಿ ಮತ್ತು ವಾಕ್ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಬಹುದೇ ಎಂಬುದಕ್ಕೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಕಾಯ್ದಿರಿಸಿತು.
ನ್ಯಾಯಮೂರ್ತಿ ಎಸ್.ಎ.ನಜೀರ್ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠವು ಈ ವಿಷಯಕ್ಕೆ ಸಂಬಂಧಿಸಿದಂತೆ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಅರ್ಜಿದಾರರ ಪರ ವಕೀಲರ ವಾದಗಳನ್ನು ಆಲಿಸಿತು.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಎ.ಎಸ್.ಬೋಪಣ್ಣ, ವಿ.ರಾಮಸುಬ್ರಹ್ಮಣಿಯನ್ ಮತ್ತು ಬಿ.ವಿ.ನಾಗರತ್ನ ಅವರು ಪೀಠದ ಇತರ ಸದಸ್ಯರಾಗಿದ್ದರು.
‘ಜನಪ್ರತಿನಿಧಿಗಳಿಗೆ ನಾವು ಹೇಗೆ ತಾನೇ ನೀತಿ ಸಂಹಿತೆ ರೂಪಿಸಲು ಸಾಧ್ಯ? ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರ ವ್ಯಾಪ್ತಿ ಕುರಿತಂತೆ ನಾವು ಹಸ್ತಕ್ಷೇಪ ಮಾಡಿದಂತಾಗುವುದಿಲ್ಲವೇ?’ ಎಂದು ನ್ಯಾಯಮೂರ್ತಿ ಗವಾಯಿ ವಿಚಾರಣೆ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಸಂವಿಧಾನದ ತತ್ವಗಳ ಅನುಸಾರ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ ಯಾವುದೇ ಸೇರ್ಪಡೆ ಅಥವಾ ನಿಬಂಧನೆಗಳ ಪರಿಷ್ಕರಣೆ ಕುರಿತ ಪ್ರಸ್ತಾಪ ಸಂಸತ್ತಿನಿಂದಲೇ ಬರಬೇಕಾಗಿದೆ ಎಂದು ಅಟಾರ್ನಿ ಜನರಲ್ ಅವರು ಪೀಠದ ಗಮನಕ್ಕೆ ತಂದರು.
ಸಂವಿಧಾನದ 21ನೇ ವಿಧಿಯನ್ನು ಉಲ್ಲೇಖಿಸಿ ನಿರ್ದಿಷ್ಟ ಹೇಳಿಕೆಗೆ ಸಂಬಂಧಿಸಿದಂತೆ ಕ್ರಮವನ್ನು ಕೋರಿ ರಿಟ್ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆಯೇ ಎಂಬುದುಸಹಜ ಚರ್ಚೆಯನ್ನು ಮೀರಿದ ಅಂಶವಾಗಿದೆ ಎಂದು ಮೆಹ್ತಾ ಅವರು ಅಭಿಪ್ರಾಯಪಟ್ಟರು.
ಸೂಕ್ಷ್ಮ ವಿಷಯಗಳ ಕುರಿತು ನಿಲುವು ವ್ಯಕ್ತಪಡಿಸುವ ಜನಪ್ರತಿನಿಧಿಗಳು ಅಥವಾ ಸಾರ್ವಜನಿಕ ಜೀವನದಲ್ಲಿ ಪ್ರಮುಖರು ಅಭಿವ್ಯಕ್ತಿ ಸ್ವಾತಂತ್ರ್ಯ ಹಕ್ಕಿನ ರಕ್ಷಣೆ ಪಡೆಯಬಹುದೇ ಕುರಿತ ವಿಷಯವನ್ನು ತ್ರಿಸದಸ್ಯರ ಪೀಠವು ಅಕ್ಟೋಬರ್ 5, 2017ರಂದು ಉನ್ನತ ಪೀಠಕ್ಕೆ ಒಪ್ಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.