ADVERTISEMENT

ಪ್ರಧಾನಿ ಮೋದಿಗಾಗಿ ಶೌಚಾಲಯವನ್ನು ಕಾಯ್ದಿರಿಸಬಹುದೇ?: ಮಲ್ಲಿಕಾರ್ಜುನ ಖರ್ಗೆ ಕಿಡಿ

ಪಿಟಿಐ
Published 16 ನವೆಂಬರ್ 2024, 11:37 IST
Last Updated 16 ನವೆಂಬರ್ 2024, 11:37 IST
<div class="paragraphs"><p>ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ </p></div>

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ

   

–ಪಿಟಿಐ ಚಿತ್ರಗಳು

ರಾಂಚಿ: ಜಾರ್ಖಂಡ್‌ನಲ್ಲಿ ತಮ್ಮ ಮತ್ತು ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್‌ಗಳ ಹಾರಾಟಕ್ಕೆ ಬೇಕಂತಲೇ ತಡೆಯೊಡ್ಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಭದ್ರತಾ ಕಾರಣಗಳಿಂದ ‘ಹಾರಾಟ ನಿಷೇಧ ವಲಯ’ವನ್ನಾಗಿ (ನೋ ಫ್ಲೈಯಿಂಗ್‌ ಝೋನ್‌) ಘೋಷಿಸಿದ್ದರಿಂದ ನನ್ನ ಮತ್ತು ರಾಹುಲ್‌ ಗಾಂಧಿ ಅವರ ಹೆಲಿಕಾಪ್ಟರ್‌ ಹಾರಾಟಕ್ಕೆ ಅನುಮತಿ ನಿರಾಕರಿಸಲಾಯಿತು ಎಂದು ಖರ್ಗೆ ಆರೋಪಿಸಿದ್ದಾರೆ.

‘ಜಾರ್ಖಂಡ್‌ನ ದೇವಘರ್‌ನಲ್ಲಿ ಶುಕ್ರವಾರ ಪ್ರಧಾನಿ ಮೋದಿ ಅವರ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದರಿಂದ ಸುಮಾರು ಎರಡು ಗಂಟೆ ಅವರು ಅಲ್ಲಿಯೇ ಇರಬೇಕಾಯಿತು. ಭದ್ರತಾ ಕಾರಣಗಳಿಂದ ‘ಹಾರಾಟ ನಿಷೇಧ ವಲಯ’ವನ್ನಾಗಿ (ನೋ ಫ್ಲೈಯಿಂಗ್‌ ಝೋನ್‌) ಘೋಷಿಸಿದ್ದರಿಂದ ರಾಹುಲ್‌ ಗಾಂಧಿ ಅವರ ಪ್ರಯಾಣದಲ್ಲೂ ವ್ಯತ್ಯಯವಾಗಿತ್ತು. ಜತೆಗೆ, ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಲಿಕಾಪ್ಟರ್ ಲ್ಯಾಂಡ್‌ ಆಗುತ್ತಿದ್ದಂತೆ ನನ್ನ ಹೆಲಿಕಾಪ್ಟರ್ ಅನ್ನು 20 ನಿಮಿಷ ತಡವಾಯಿತು. ಅಮಿತ್ ಶಾ ಅವರ ಮಾರ್ಗ ಪ್ರತ್ಯೇಕವಾಗಿತ್ತು. ನನ್ನ ಮಾರ್ಗವು ಪ್ರತ್ಯೇಕವಾಗಿತ್ತು. ಆದರೂ ಉದ್ದೇಶಪೂರ್ವಕವಾಗಿ ನನ್ನ ಹೆಲಿಕಾಪ್ಟರ್‌ ಅನ್ನು ತಡೆಯಲಾಯಿತು’ ಖರ್ಗೆ ಗುಡುಗಿದ್ದಾರೆ.

‘ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರು ಕ್ಯಾಬಿನೆಟ್ ಸಚಿವ ಸ್ಥಾನವನ್ನು ಹೊಂದಿದ್ದಾರೆ. ಆದೇ ರೀತಿ ರಾಷ್ಟ್ರೀಯ ಪಕ್ಷದ ಅಧ್ಯಕ್ಷನಾಗಿ ನನಗೂ ನನ್ನದೇ ಆದ ಗೌರವವಿದೆ. ವಿಮಾನ ನಿಲ್ದಾಣವನ್ನು ‘ಹಾರಾಟ ನಿಷೇಧ ವಲಯ’ವನ್ನಾಗಿ (ನೋ ಫ್ಲೈಯಿಂಗ್‌ ಝೋನ್‌) ಘೋಷಣೆ ಮಾಡುವುದಾದರೇ, ಪ್ರಧಾನಿ ಮೋದಿಗಾಗಿ ಶೌಚಾಲಯವನ್ನು ಕಾಯ್ದಿರಿಸಬಹುದೇ? ಎಂದು ನಾನು ಅಧಿಕಾರಿಗಳನ್ನು ಕೇಳಲು ಬಯಸುತ್ತೇನೆ’ ಎಂದು ಖರ್ಗೆ ಪ್ರಶ್ನಿಸಿದ್ದಾರೆ.

ಒಳನುಸುಳುವಿಕೆ ವಿಚಾರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನಿದ್ದೆ ಮಾಡುತ್ತಿದ್ದಾರಾ? ಅಧಿಕಾರದಲ್ಲಿದ್ದರೂ ಅವರು ಒಳನುಸುಳುವಿಕೆಯನ್ನು ಏಕೆ ತಡೆಯುತ್ತಿಲ್ಲ? ಬಿಜೆಪಿ ನಾಯಕರು ನಮ್ಮ ಹೆಲಿಕಾಪ್ಟರ್‌ಗಳನ್ನು ನಿಲ್ಲಿಸಬಹುದಾದರೇ ನುಸುಳುಕೋರರನ್ನು ಏಕೆ ತಡೆಯಲು ಸಾಧ್ಯವಿಲ್ಲ? ಎಂದು ಕಟುವಾಗಿ ಟೀಕಿಸಿದ್ದಾರೆ.

ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ನಾಯಕರ ವಿರುದ್ಧ ಕೇಂದ್ರ ಸರ್ಕಾರ ಇ.ಡಿ, ಸಿಬಿಐ, ಐಟಿಯನ್ನು ಬಳಸುತ್ತಿದೆ ಎಂದು ಖರ್ಗೆ ಆರೋಪಿಸಿದ್ದಾರೆ.

ಜಾರ್ಖಂಡ್‌ನ ಗೊಡ್ಡಾದಲ್ಲಿ ಶುಕ್ರವಾರ ರಾಹುಲ್‌ ಗಾಂಧಿ ಅವರ ಹೆಲಿಕಾಪ್ಟರ್‌ಗೆ ಟೇಕ್‌ ಆಫ್‌ ಮಾಡಲು ಮತ್ತು ದೇವಘರ್‌ನಲ್ಲಿ ಇಳಿಯಲು ಅನುಮತಿ ನಿರಾಕರಿಸಲಾಯಿತು. ಇದರ ಪರಿಣಾಮ ರಾಹುಲ್‌ ಅವರ ಪ್ರಚಾರ ಕಾರ್ಯಗಳು ವಿಳಂಬವಾಗಿದ್ದು, ಇದು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.