ನವದೆಹಲಿ: ಆಸ್ಟ್ರೇಲಿಯಾಕ್ಕೆ ತೆರಳಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅಲ್ಲಿಯ ವಿದೇಶಾಂಗ ಸಚಿವೆ ಪೆನ್ನಿ ವೊಂಗ್ ಅವರೊಂದಿಗೆ ನಡೆಸಿದ ಸುದ್ದಿಗೋಷ್ಠಿ ಪ್ರಸಾರವಾಗದಂತೆ ಕೆನಡಾದಲ್ಲಿ ಆಸ್ಟ್ರೇಲಿಯಾದ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ ಎಂದು ಭಾರತ ಹೇಳಿದೆ.
‘ಕೆನಡಾದ ಈ ನಡೆ ವಾಕ್ ಸ್ವಾತಂತ್ರ್ಯದ ಬಗ್ಗೆ ತೋರಿಸಿದ ಬೂಟಾಟಿಕೆಯಾಗಿದೆ’ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
‘ಆಸ್ಟ್ರೇಲಿಯಾದ ಪ್ರಮುಖ ಮಾಧ್ಯಮಗಳು ವೊಂಗ್ ಹಾಗೂ ಜೈಶಂಕರ್ ಅವರ ಸುದ್ದಿಗೋಷ್ಠಿಯನ್ನು ಪ್ರಸಾರ ಮಾಡಿತ್ತು. ಸುದ್ದಿಗೋಷ್ಠಿ ಪ್ರಸಾರವಾದ ಗಂಟೆಗಳಲ್ಲಿ ಕೆನಾಡದಲ್ಲಿ ಆಸ್ಟ್ರೇಲಿಯಾದ ಮಾಧ್ಯಮ, ಅವುಗಳ ಹಲವು ಸಾಮಾಜಿಕ ಮಾಧ್ಯಮಗಳ ಪುಟಗಳನ್ನು ಕೆನಡಾ ನಿರ್ಬಂಧಿಸಿದೆ. ಹೀಗಾಗಿ ಅಲ್ಲಿಯ ಜನರಿಗೆ ವೀಕ್ಷಿಸಿಲು ಸಿಗುತ್ತಿಲ್ಲ ಎನ್ನುವುದು ತಿಳಿದುಬಂದಿದೆ’ ಎಂದು ಅವರು ತಿಳಿಸಿದ್ದಾರೆ.
‘ಮಾಧ್ಯಮಗಳಿಗೆ ನಿರ್ಬಂಧ ಹೇರಿರುವ ವಿಚಾರ ನಮಗೆ ಅಚ್ಚರಿಯನ್ನುಂಟು ಮಾಡಿದೆ. ಆದರೆ ಅದೇನೇ ಇದ್ದರೂ, ಕೆನಡಾ ವಾಕ್ ಸ್ವಾತಂತ್ರ್ಯದ ಬಗೆಗೆ ಇರುವ ಬೂಟಾಟಿಕೆಯನ್ನು ಎತ್ತಿತೋರಿಸುತ್ತಿದೆ’ ಎಂದಿದ್ದಾರೆ.
‘ಜೈಶಂಕರ್ ಅವರು ಮಾಧ್ಯಮಗಳೊಂದಿಗೆ ಮಾತನಾಡುವಾಗ ಕೆನಡಾ ಯಾವುದೇ ಆಧಾರವಿಲ್ಲದೆ ಭಾರತದ ಮೇಲೆ ಮಾಡಿರುವ ಆರೋಪಗಳ ಬಗ್ಗೆ ಮಾತನಾಡಿದ್ದಾರೆ. ಜತೆಗೆ ಭಾರತದ ರಾಜತಾಂತ್ರಿಕ ಅಧಿಕಾರಿಗಳು, ಕೆನಡಾದ ನಡೆ ಸ್ವೀಕಾರಾರ್ಹವಲ್ಲ ಎಂದಿದ್ದಾರೆ ಎನ್ನುವುದನ್ನು ಒತ್ತಿ ಹೇಳಿದ್ದಾರೆ. ಮೂರನೆಯದಾಗಿ ಕೆನಡಾದಲ್ಲಿ ಭಾರತ ವಿರೋಧಿ ಅಂಶಗಳಿಗೆ ರಾಜಕೀಯ ಬಣ್ಣ ನೀಡಲಾಗಿದೆ ಎಂದಿದ್ದಾರೆ’ ಎಂದು ಜೈಸ್ವಾಲ್ ಹೇಳಿದ್ದಾರೆ.
ಈ ಕುರಿತಂತೆ ಕೆನಡಾ ಯಾವುದೇ ಪ್ರಕ್ರಿಯೆ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.