ನವದೆಹಲಿ: ಅಕ್ಟೋಬರ್ 10ರೊಳಗೆ ಸುಮಾರು 40 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳುವಂತೆ ಕೆನಡಾಗೆ ಭಾರತ ಹೇಳಿದೆ ಎಂದು Financial Times ವರದಿ ಮಾಡಿದೆ.
ನಿಗದಿತ ದಿನಾಂಕದ ನಂತರವೂ ಇಲ್ಲಿಯೇ ಉಳಿಯುವ ಅಧಿಕಾರಿಗಳಿಗೆ ಎಲ್ಲ ವಿನಾಯಿತಿಗಳನ್ನು ರದ್ದುಪಡಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಚ್ಚರಿಕೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದರು. ಇದಾದ ಬಳಿಕ ಉಭಯ ರಾಷ್ಟ್ರಗಳ ಸಂಬಂಧ ಹಳಸಿದೆ.
ಟ್ರುಡೊ ಹೇಳಿಕೆ ಬೆನ್ನಲ್ಲೇ ಭಾರತವು ಸೆಪ್ಟೆಂಬರ್ 18ರಂದು ಕೆನಡಾ ಪ್ರಜೆಗಳಿಗೆ ವೀಸಾ ಸೇವೆ ರದ್ದು ಮಾಡಿತ್ತು.
ಉಭಯ ದೇಶಗಳು ನೇಮಿಸುವ ರಾಜತಾಂತ್ರಿಕ ಅಧಿಕಾರಿಗಳ ಸಂಖ್ಯೆ ಮತ್ತು ಸ್ಥಾನಗಳಲ್ಲಿ ಭಾರತವು 'ಸಮಾನತೆ'ಯನ್ನು ಬಯಸುತ್ತದೆ ಎಂದು ಸರ್ಕಾರ ಈ ಮೊದಲು ಹೇಳಿತ್ತು.
ನಿಜ್ಜರ್‌ನನ್ನು ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹಲವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಹೊಂದಿದ್ದ ಈತನನ್ನು ಭಾರತವು ಉಗ್ರರ ಪಟ್ಟಿಗೆ ಸೇರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.