ನವದೆಹಲಿ: ಮಾಹಿತಿ ಹಕ್ಕು (ತಿದ್ದುಪಡಿ) ಕಾಯ್ದೆಯು (ಆರ್‌ಟಿಐ) ಪ್ರತಿಗಾಮಿಯಾಗಿದ್ದು ಅದನ್ನು ಕೈಬಿಡಬೇಕು ಎಂದು ನಿವೃತ್ತ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ ಮತ್ತು ಇತರ ಆರು ನಿವೃತ್ತ ಮಾಹಿತಿ ಆಯುಕ್ತರು ಒತ್ತಾಯಿಸಿದ್ದಾರೆ. ತಿದ್ದುಪಡಿ ಕಾಯ್ದೆಯು ಮಾಹಿತಿ ಆಯುಕ್ತರ ಸ್ವಾಯತ್ತೆಯ ಮೇಲೆ ನೇರ ದಾಳಿಯಾಗಿದೆ ಎಂದು ಈ ನಿವೃತ್ತ ಆಯುಕ್ತರು ಹೇಳಿದ್ದಾರೆ.
ಮಾಜಿ ಮಾಹಿತಿ ಆಯುಕ್ತರಾದ ಶೈಲೇಶ್ ಗಾಂಧಿ, ಶ್ರೀಧರ ಆಚಾರ್ಯುಲು, ದೀಪಕ್ ಸಂಧು, ಎಂ.ಎಂ. ಅನ್ಸಾರಿ, ಯಶೋವರ್ಧನ ಆಜಾದ್ ಮತ್ತು ಅನ್ನಪೂರ್ಣಾ ದೀಕ್ಷಿತ್ ಅವರು, ವಜಾಹತ್ ಅವರ ಜತೆಗೆ ಮಾಧ್ಯಮಗೋಷ್ಠಿ ನಡೆಸಿ ಸರ್ಕಾರದ ನಿಲುವನ್ನು ಖಂಡಿಸಿದ್ದಾರೆ.
ಈ ತಿದ್ದುಪಡಿಯು ಜನರ ಮಾಹಿತಿ ಪಡೆದುಕೊಳ್ಳುವ ಮೂಲಭೂತ ಹಕ್ಕನ್ನೇ ಮೊಟಕುಗೊಳಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ಅಧಿಕಾರಾವಧಿ ಮತ್ತು ವೇತನವನ್ನು ನಿರ್ಧರಿಸುವ ಅಧಿಕಾರವನ್ನು ಈ ತಿದ್ದುಪಡಿಯು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಈಗ ಇರುವ ಕಾಯ್ದೆ ಪ್ರಕಾರ, ಇವರಿಗೆ ಐದು ವರ್ಷಗಳ ನಿಶ್ಚಿತ ಅವಧಿ ಇದೆ. ಮುಖ್ಯ ಮಾಹಿತಿ ಆಯುಕ್ತರಿಗೆ ಚುನಾವಣಾ ಆಯುಕ್ತರಿಗೆ ಸಮನಾದ ಸ್ಥಾನಮಾನ ಇದೆ. ಹಾಗೆಯೇ ಮಾಹಿತಿ ಆಯುಕ್ತರಿಗೆ ಚುನಾವಣಾ ಆಯುಕ್ತರಿಗೆ ಸಮನಾದ ಸ್ಥಾನಮಾನ ಇದೆ. ಚುನಾವಣಾ ಆಯೋಗ ಮತ್ತು ಮಾಹಿತಿ ಆಯೋಗದ ಕೆಲಸಗಳು ಭಿನ್ನ. ಹಾಗಾಗಿ, ಅಧಿಕಾರಾವಧಿ ಹಾಗೂ ವೇತನದಲ್ಲಿಯೂ ವ್ಯತ್ಯಾಸ ಇರಬೇಕು ಎಂಬ ಕಾರಣಕ್ಕೆ ತಿದ್ದುಪಡಿಗೆ ಕೇಂದ್ರ ಮುಂದಾಗಿದೆ.
ಆಯುಕ್ತರ ಅಧಿಕಾರಾವಧಿ ಮತ್ತು ವೇತನವು ಯಾವತ್ತೂ ವಿವಾದದ ವಿಷಯವೇ ಆಗಿರಲಿಲ್ಲ. ಹಾಗಿರುವಾಗ ಇದನ್ನು ಬದಲಾಯಿಸುವ ಅಗತ್ಯ ಏನಿತ್ತು ಎಂದು ಹಬೀಬುಲ್ಲಾ ಪ್ರಶ್ನಿಸಿದ್ದಾರೆ. ವೇತನ ಮತ್ತು ಅಧಿಕಾರಾವಧಿಯನ್ನು ಸರ್ಕಾರವೇ ನಿರ್ಧರಿಸುತ್ತದೆ ಎಂದಾದರೆ ಆಯುಕ್ತರ ಮನಸ್ಸಿನಲ್ಲಿ ಆತಂಕ ಇರುತ್ತದೆ ಮತ್ತು ಅವರು ಸರ್ಕಾರದ ಮರ್ಜಿಯಲ್ಲಿ ಇರಬೇಕಾಗುತ್ತದೆ ಎಂದು ಹಬೀಬುಲ್ಲಾ ಹೇಳಿದ್ದಾರೆ.
ತಿದ್ದುಪಡಿಗೆ ಸಮರ್ಥನೀಯವಾದ ಕಾರಣವನ್ನು ಸರ್ಕಾರ ಕೊಟ್ಟಿಲ್ಲ ಎಂದು ಶೈಲೇಶ್ ಗಾಂಧಿ ಹೇಳಿದ್ದಾರೆ. ‘2005ರಲ್ಲಿ ಆರ್‌ಟಿಐ ಕಾಯ್ದೆ ಜಾರಿಗೆ ಮುನ್ನ ಮಸೂದೆಯನ್ನು ಸಂಸತ್ತಿನ ಸಮಿತಿಯ ಪರಿಶೀಲನೆಗೆ ಒಳಪಡಿಸಲಾಗಿತ್ತು. ಆ ಸಮಿತಿಯಲ್ಲಿ ಬಿಜೆಪಿಯ ಹಲವು ಸಂಸದರೂ ಇದ್ದರು. ಈಗಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರೂ ಆ ಸಮಿತಿಯ ಸದಸ್ಯರಾಗಿದ್ದರು’ ಎಂದು ಶೈಲೇಶ್ ಹೇಳಿದ್ದಾರೆ. ಕಾಯ್ದೆಯಲ್ಲಿ ಲೋಪಗಳಿವೆ ಎಂಬುದನ್ನೂ ಅವರು ಅಲ್ಲಗಳೆದಿದ್ದಾರೆ.
ಹೇಳಿದ್ದೇನು?
*ತಿದ್ದುಪಡಿಗೆ ಮುನ್ನ ಸರ್ಕಾರವು ಸಮಾಲೋಚನೆ ನಡೆಸಿಲ್ಲ. ಹಾಗಾಗಿ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕು
*ಅಧಿಕಾರಾವಧಿ ಮತ್ತು ವೇತನದ ಮೇಲಿನ ನಿಯಂತ್ರಣವು ಆಯೋಗದ ಸ್ವಾಯತ್ತೆಯನ್ನು ಕುಗ್ಗಿಸಬಹುದು
*ತಿದ್ದುಪಡಿ ಮಸೂದೆ ಅಂಗೀಕಾರವಾದರೆ ಒಬ್ಬೊಬ್ಬರ ಆಯುಕ್ತರ ವೇತನ ಮತ್ತು ಅಧಿಕಾರಾವಧಿ ಭಿನ್ನವಾಗಿರಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.