ನವದೆಹಲಿ: ದೇಶದಲ್ಲಿ ಈ ವರ್ಷ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಅಂದಾಜು 13.9 ಲಕ್ಷ ಹಾಗೂ 2025ಕ್ಕೆ ಪ್ರಕರಣಗಳ ಸಂಖ್ಯೆ 15.7 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇರುವುದಾಗಿ ಐಸಿಎಂಆರ್ ವರದಿ ಮೂಲಕ ತಿಳಿದು ಬಂದಿದೆ.
ಬೆಂಗಳೂರು ಮೂಲದ ರಾಷ್ಟ್ರೀಯ ರೋಗ ಸೂಚನಾ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ (ಎನ್‌ಸಿಡಿಐಆರ್) ಮತ್ತು ಐಸಿಎಂಆರ್ ಕ್ಯಾನ್ಸರ್ ಪ್ರಕರಣಗಳ ಅಂದಾಜು ನಡೆಸಿದೆ. ಕ್ಯಾನ್ಸರ್ ಪ್ರಕರಣಗಳನ್ನು ದಾಖಲಿಸಿಕೊಳ್ಳುವ 28 ಕೇಂದ್ರಗಳಿಂದ ಮಾಹಿತಿ ಸಂಗ್ರಹಿಸಿ ರಾಷ್ಟ್ರೀಯ ಕ್ಯಾನ್ಸರ್ ರೆಜಿಸ್ಟ್ರಿ ಪ್ರೋಗ್ರಾಮ್ ವರದಿ, 2020 ಸಲ್ಲಿಸಲಾಗಿದೆ. ಇದರೊಂದಿಗೆ 58 ಆಸ್ಪತ್ರೆ ಆಧಾರಿತ ನೋಂದಣಿಗಳಿಂದ ಮಾಹಿತಿ ಪಡೆಯಲಾಗಿದೆ.
ತಂಬಾಕು ಸೇವನೆಗೆ ಸಂಬಂಧಿಸಿದಂತೆ 3.7 ಲಕ್ಷ ಕ್ಯಾನ್ಸರ್ ಪ್ರಕರಣಗಳು 2020ರಲ್ಲಿ ದಾಖಲಾಗಲಿವೆ ಎಂದು ಅಂದಾಜಿಸಲಾಗಿದೆ. ಒಟ್ಟು ಪ್ರಕರಣಗಳ ಪೈಕಿ ಶೇ 27.1ರಷ್ಟು ತಂಬಾಕು ಸೇವೆಯಿಂದ ಉಂಟಾದ ಕ್ಯಾನ್ಸರ್ ಪ್ರಕರಣಗಳು ಆಗಿರಲಿವೆ.
'ಒಟ್ಟು ಕ್ಯಾನ್ಸರ್ ಪ್ರಕರಣಗಳ ಪೈಕಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಸುಮಾರು 2 ಲಕ್ಷ ಪ್ರಕರಣಗಳು (ಶೇ 14.8), ಗರ್ಭಕಂಠ (ಸೆರ್ವಿಕ್ಸ್) ಕ್ಯಾನ್ಸರ್‌ನಿಂದ 0.75 ಲಕ್ಷ ಪ್ರಕರಣಗಳು (ಶೇ 5.4) ಹಾಗೂ ಪರುಷ ಮತ್ತು ಮಹಿಳೆ ಇಬ್ಬರಲ್ಲಿಯೂ ಜೀರ್ಣಾಂಗವ್ಯೂಹದಲ್ಲಿ( ಗ್ಯಾಸ್ಟ್ರೊಇನ್ಟೆಸ್ಟೈನಲ್ ಟ್ರ್ಯಾಕ್ಟ್) ಕಾಣಿಸಿಕೊಳ್ಳುವ ಕ್ಯಾನ್ಸರ್‌ನ 2.7 ಲಕ್ಷ ಪ್ರಕರಣಗಳು (ಶೇ 19.7)' ದಾಖಲಾಗಿರುವುದಾಗಿ ವರದಿ ಹೇಳಿದೆ.
ಕ್ಯಾನ್ಸರ್ ಪ್ರಕರಣಗಳ ಪ್ರಮಾಣ 1,00,000 ಪುರುಷರ ಪೈಕಿ ಮಿಜೊರಾಂನ ಐಜೋಲ್ ಜಿಲ್ಲೆಯಲ್ಲಿ 269.4 ಪ್ರಕರಣಗಳಿದ್ದು, ಇದು ಭಾರತದಲ್ಲಿಯೇ ಅತಿ ಹೆಚ್ಚು. ಮಹಾರಾಷ್ಟ್ರದ ಉಸ್ಮಾನಾಬಾದ್ ಮತ್ತು ಬೀಡ್ ಜಿಲ್ಲೆಗಳಲ್ಲಿ 39.5 ಪ್ರಕರಣಗಳಿವೆ. ಪ್ರತಿ 1,00,000 ಮಹಿಳೆಯರ ಪೈಕಿ ಅರುಣಾಚಲ ಪ್ರದೇಶದ ಪಾಪುಂಪಾರೆ ಜಿಲ್ಲೆಯಲ್ಲಿ 219.8 ಕ್ಯಾನ್ಸರ್ ಪ್ರಕರಣಗಳಿಂದ ಹಿಡಿದು ಉಸ್ಮಾನಾಬಾದ್ ಮತ್ತು ಬೀಡ್ ಜಿಲ್ಲೆಗಳಲ್ಲಿ 49.4 ಪ್ರಕರಣಗಳು ದಾಖಲಾಗಿರುವುದಾಗಿ ಪ್ರಕಟಣೆ ತಿಳಿಸಿದೆ.
ದೇಶದ ಈಶಾನ್ಯ ಪ್ರದೇಶದಲ್ಲಿ ತಂಬಾಕು ಬಳಕೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಕ್ಯಾನ್ಸರ್ ಉಂಟಾಗುತ್ತಿದೆ. ಪುರುಷರಲ್ಲಿ ಶ್ವಾಸಕೋಶ, ಬಾಯಿ, ಜಠರ ಹಾಗೂ ಅನ್ನನಾಳದ ಕ್ಯಾನ್ಸರ್ ಸಾಮಾನ್ಯವಾಗಿದೆ. ಮಹಿಳೆಯರಲ್ಲಿ ಸ್ತನ ಹಾಗೂ ಗರ್ಭಕಂಠ ಕ್ಯಾನ್ಸರ್ ಹೆಚ್ಚು ಕಾಣಿಸಿಕೊಳ್ಳುತ್ತಿದೆ.
ಶಸ್ತ್ರಚಿಕಿತ್ಸೆ, ಕೀಮೊಥೆರಪಿ ಹಾಗೂ ರೇಡಿಯೇಷನ್ ಥೆರಪಿಗಳ ಮೂಲಕ ಸ್ತನ ಕ್ಯಾನ್ಸರ್, ತಲೆ ಮತ್ತು ಕುತ್ತಿಗೆ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗರ್ಭಕಂಠ ಕ್ಯಾನ್ಸರ್‌ಗೆ ರೇಡಿಯೊಥೆರಪಿ ಹಾಗೂ ಕೀಮೊಥೆರಪಿಗಳ ಸಹಾಯದಿಂದ ಚಿಕಿತ್ಸೆ ನಡೆಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.