ಪಣಜಿ: ‘ಕೋವಿಡ್ ಬಳಿಕ ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ’ ಎಂದು ಯೋಗ ಗುರು ಬಾಬಾ ರಾಮ್‌ದೇವ್ ಶನಿವಾರ ಹೇಳಿದರು.
ಪತಂಜಲಿ ಯೋಗ ಸಮಿತಿಯು ಮಿರಾಮಾರ್ ಬೀಚ್‌ನಲ್ಲಿ ಶನಿವಾರದಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಯೋಗ ಶಿಬಿರಕ್ಕೆ ಆಗಮಿಸಿದ ಜನರುದ್ದೇಶಿಸಿ ಅವರು ಮಾತನಾಡಿದರು. ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ವೇದಿಕೆಯಲ್ಲಿದ್ದರು.
‘ಕ್ಯಾನ್ಸರ್ ವಿಪರೀತವಾಗಿ ಹೆಚ್ಚುತ್ತಿದೆ. ಜನರು ತಮ್ಮ ಕಣ್ಣಿನ ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ, ಕಿವುಡರಾಗುತ್ತಿದ್ದಾರೆ’ ಎಂದು ರಾಮದೇವ್ ಅವರು ಹೇಳಿದರು.
‘ಆರೋಗ್ಯದ ವಿಚಾರದಲ್ಲಿ ಭಾರತವು ಜಾಗತಿಕ ಕೇಂದ್ರವಾಗಬೇಕು ಎಂಬುದು ಪ್ರಧಾನಿ ಮೋದಿ ಕನಸು. ಹಾಗೆಯೇ, ಗೋವಾ ಆರೋಗ್ಯದ ಕೇಂದ್ರವಾಗಬೇಕು ಎಂಬುದು ನನ್ನ ಕನಸು. ಪ್ರವಾಸಿಗರು ಕೇವಲ ತಿರುಗಾಟಕ್ಕೆ ಮಾತ್ರ ಗೋವಾಗೆ ಬರಬಾರದು. ಬದಲಿಗೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಥೈರಾಯ್ಡ್, ಕ್ಯಾನ್ಸರ್ ಹಾಗೂ ಇತರೆ ರೋಗಗಳಿಗೆ ಚಿಕಿತ್ಸೆ ಪಡೆಯಲು ಜನರು ಇಲ್ಲಿಗೆ ಬರಬೇಕು. ಗೋವಾ ರಾಜ್ಯವು ಯೋಗ, ಆಯುರ್ವೇದ, ಸನಾತನ ಹಾಗೂ ಆಧ್ಯಾತ್ಮಿಕತೆಯ ಪ್ರವಾಸ ಕೇಂದ್ರವಾಗಬೇಕು’ ಎಂದರು.
ಇದೇ ವೇಳೆ, ರಾಮ್‌ದೇವ್ ಅವರ ಮಾರ್ಗದರ್ಶನದಲ್ಲಿ ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ಕ್ಷೇತ್ರದಲ್ಲಿ ತಂಡವೊಂದು ನಡೆಸಿದ ಸಂಶೋಧನೆಯನ್ನು ಹೊಗಳಿದ ಪ್ರಮೋದ್ ಸಾವಂತ್ ಅವರು, ‘ಗೋವಾವನ್ನು ಯೋಗಭೂಮಿಯನ್ನಾಗಿ ಪರಿವರ್ತಿಸಲು ತಮ್ಮ ಸರ್ಕಾರವು ಎಲ್ಲ ಸಹಾಯ ನೀಡುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.