ಐಜ್ವಾಲ್: ಸಂಘರ್ಷ ಪೀಡಿತ ಮಣಿಪುರದ ಜಿರೀಬಾಮ್ ಜಿಲ್ಲೆಯಲ್ಲಿ ಸೋಮವಾರ (ನ.11) ಶಂಕಿತ ಹಮರ್ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಗುಂಡಿನ ಚಕಮಕಿಯಲ್ಲಿ 10 ಶಂಕಿತ ಉಗ್ರರು ಹತರಾಗಿದ್ದರು. ಘಟನೆ ಖಂಡಿಸಿ ಐಜ್ವಾಲ್‌ನಲ್ಲಿ ಶುಕ್ರವಾರ ಸಂಜೆ ಮೊಂಬತ್ತಿ ಮೆರವಣಿಗೆ ನಡೆಸಲಾಯಿತು.
ಹಮರ್- ಮಿಜೋ ಸಮುದಾಯಕ್ಕೆ ಸೇರಿದ 10 ಜನರನ್ನು ಭದ್ರತಾ ಪಡೆಗಳು ಹತ್ಯೆಗೈದಿವೆ ಎಂದು ಆರೋಪಿಸಿರುವ ಮಿಜೋ ಡಿಫೆನ್ಸ್ ಲೀಗ್ ಈ ಮೊಂಬತ್ತಿ ಮೆರವಣಿಗೆಯನ್ನು ಆಯೋಜಿಸಿತ್ತು.
ಮೈತೇಯಿ ಮತ್ತು ಕುಕಿ-ಜೋ ಸಮುದಾಯದ ನಡುವಿನ ಜನಾಂಗೀಯ ಹಿಂಸಾಚಾರವನ್ನು ತಡೆಯಲು ಕೇಂದ್ರ ಹಾಗೂ ಮಣಿಪುರ ಸರ್ಕಾರ ವಿಫಲವಾಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಅಸ್ಸಾಂನ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ (ಎಸ್‌ಎಂಸಿಎಚ್) ಶವಾಗಾರದಲ್ಲಿ ಇರಿಸಲಾಗಿರುವ 10 ಜನರ ಶವಗಳನ್ನು ಅವರ ಕುಟುಂಬಗಳಿಗೆ ತಕ್ಷಣವೇ ಹಸ್ತಾಂತರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮೈತೇಯಿ ಸಮುದಾಯಕ್ಕೆ ಸೇರಿದವರು ಎನ್ನಲಾದ ಶಸ್ತ್ರಸಜ್ಜಿತ ಗುಂಪೊಂದು ನವೆಂಬರ್ 7 ರಂದು ಹಮರ್ ಸಮುದಾಯದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿ ಹತ್ಯೆ ಮಾಡಿತ್ತು. ಆ ಬಳಿಕ ಜಿರೀಬಾಮ್ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ನವೆಂಬರ್ 11 ರಂದು ಮಧ್ಯಾಹ್ನ 3ರ ವೇಳೆಗೆ ಜಕುರಾಧೋರ್‌ನಲ್ಲಿ ನಿಯೋಜಿಸಿರುವ ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಬೋರೊಬೆಕ್ರಾ ಪೊಲೀಸ್ ಠಾಣೆಯ ಮೇಲೆ ಶಸ್ತ್ರಸಜ್ಜಿತ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಪೊಲೀಸರು ಪ್ರತಿದಾಳಿ ನಡೆಸಿದ್ದರು. ಸುಮಾರು 45 ನಿಮಿಷ ಗುಂಡಿನ ಚಕಮಕಿ ನಡೆದಿತ್ತು. ಆ ಬಳಿಕ ಭದ್ರತಾ ಸಿಬ್ಬಂದಿ ಸ್ಥಳದಲ್ಲಿ ಶೋಧ ನಡೆಸಿದಾಗ 10 ಮೃತದೇಹಗಳು ಪತ್ತೆಯಾಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.