ನವದೆಹಲಿ: ಛತ್ತೀಸಗಡದ ರಾಯ್‌ಪುರದಲ್ಲಿ ನಡೆದ 'ಧರ್ಮ ಸಂಸತ್' ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಮೂಲಕ ಮಹಾತ್ಮ ಗಾಂಧಿಯವರ ಚಿಂತನೆಗಳನ್ನು ಹಿಡಿದಿಡಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ನೀವು ನನ್ನನ್ನು ಕಟ್ಟಿಹಾಕಬಹುದು, ತೊಂದರೆ ನೀಡಬಹುದು, ನನ್ನ ದೇಹವನ್ನು ನಾಶ ಮಾಡಬಹುದು, ಆದರೆ ನನ್ನ ಚಿಂತನೆಗಳನ್ನು ನಾಶಮಾಡಲು ನಿಮ್ಮಿಂದ ಸಾಧ್ಯವಿಲ್ಲ' ಎಂಬ ಮಹಾತ್ಮ ಗಾಂಧಿಯವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ಭಾನುವಾರ ಸಂಜೆ ಛತ್ತೀಸಗಡದ ರಾಯ್‌ಪುರದಲ್ಲಿ ನಡೆದ ಎರಡು ದಿನಗಳ 'ಧರ್ಮ ಸಂಸತ್' ಕಾರ್ಯಕ್ರಮದಲ್ಲಿ ಕಾಳಿಚರಣ್, ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಪದವನ್ನು ಬಳಸಿದ್ದರು ಮತ್ತು ಧರ್ಮದ ರಕ್ಷಣೆಗಾಗಿ ಕಟ್ಟಾ ಹಿಂದೂ ನಾಯಕನನ್ನು ಸರ್ಕಾರದ ಮುಖ್ಯಸ್ಥನನ್ನಾಗಿ ಆಯ್ಕೆ ಮಾಡುವಂತೆ ಜನರಲ್ಲಿ ಕೇಳಿಕೊಂಡಿದ್ದರು.
ಕಾಂಗ್ರೆಸ್ ನಾಯಕ ಪ್ರಮೋದ್ ದುಬೆ ನೀಡಿರುವ ದೂರಿನ ಆಧಾರದ ಮೇಲೆ ಕಾಳಿಚರಣ್ ವಿರುದ್ಧ ಭಾನುವಾರ ರಾತ್ರಿ ತಿಕ್ರಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಯತಿ ನರಸಿಂಘಾನಂದ ಗಿರಿ, ಮಹಾತ್ಮ ಗಾಂಧಿ ಹಂತಕ ಗೋಡ್ಸೆಯನ್ನು ಹೊಗಳಿದ್ದರು. ಗೋಡ್ಸೆ ಸತ್ಯ ಮತ್ತು ಧರ್ಮದ ಪ್ರತೀಕ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.