ADVERTISEMENT

ಜಾಮಿಯಾ ಮಿಲಿಯಾ ವಿವಿ ಹಿಂಸಾಚಾರ: ‘ಹೊಣೆಗಾರರು ಯಾರೆಂದು ಈಗಲೇ ಹೇಳಲಾಗದು’

ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರ

ಪಿಟಿಐ
Published 19 ಮಾರ್ಚ್ 2020, 20:07 IST
Last Updated 19 ಮಾರ್ಚ್ 2020, 20:07 IST
ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ಸಮೀಪ ನಡೆದಿದ್ದ ಪ್ರತಿಭಟನೆ. (ಸಂಗ್ರಹ ಚಿತ್ರ, ಕೃಪೆ- ಪಿಟಿಐ)
ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ ಸಮೀಪ ನಡೆದಿದ್ದ ಪ್ರತಿಭಟನೆ. (ಸಂಗ್ರಹ ಚಿತ್ರ, ಕೃಪೆ- ಪಿಟಿಐ)   

ನವದೆಹಲಿ: ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಯಾರು ಜವಾಬ್ದಾರರು ಎಂದು ಈಗಲೇ ಹೇಳಲಾಗದು ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ರಾಜ್ಯಸಭೆಯಲ್ಲಿ ಗುರುವಾರ ಹೇಳಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಪ್ರಕರಣದ ಬಗ್ಗೆ ಚರ್ಚಿಸಿದರೆ ನ್ಯಾಯಾಂಗ ನಿಂದನೆ ಆಗುವುದರಿಂದ ಸರ್ಕಾರವು ಹೆಚ್ಚಿನ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಹಿಂಸಾಚಾರದಲ್ಲಿ ದೆಹಲಿ ಪೊಲೀಸರ ಪಾತ್ರ ಹಾಗೂ ಹಾನಿಯ ಮೊತ್ತವನ್ನು ಅವರಿಂದ ವಸೂಲಿ ಮಾಡುವ ಕುರಿತಂತೆ ತನಿಖಾ ತಂಡವನ್ನು ಸರ್ಕಾರ ರಚಿಸಲಿದೆಯೇ ಎಂದು ಸಚಿವರಿಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಅವರು, ‘ಇಂತಹ ಘಟನೆಗಳಲ್ಲಿ ಸತ್ಯಾಂಶಗಳು ಹಾಗೂ ಸಾಕ್ಷ್ಯಗಳು ಇರುತ್ತವೆ. ಯಾರು ಹೊಣೆಗಾರರು ಎಂದು ಈಗಲೇ ಹೇಳುವುದು ಆತುರದ ನಿರ್ಧಾರವಾಗುತ್ತದೆ. ತಪ್ಪಿತಸ್ಥರನ್ನು ಶಿಕ್ಷೆಯ ಪರಿಧಿಗೆ ತರುವುದಾಗಿ ಗೃಹಸಚಿವಾಲಯ ಈಗಾಗಲೇ ಭರವಸೆ ನೀಡಿದೆ’ ಎಂ‌ದಿದ್ದಾರೆ.

ADVERTISEMENT

ಗಲಭೆಯಲ್ಲಿ ದೆಹಲಿ ಪೊಲೀಸರ ಪಾತ್ರದ ಬಗ್ಗೆ ಪರಾಮರ್ಶೆ ನಡೆಸಲು ವಿಡಿಯೊಗಳನ್ನು ಸಾಕ್ಷ್ಯಗಳ
ನ್ನಾಗಿ ಪರಿಗಣಿಸುತ್ತೀರಾ ಎಂಬ ಪ್ರಶ್ನೆಗೆ, ‘ವಿಡಿಯೋಗಳಿಂದ ಸಾಕಷ್ಟು ಸಂಶಯಗಳು ಎದ್ದಿವೆ. ಆದರೆ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಈ ಬಗ್ಗೆ ಚರ್ಚಿಸುವುದಿಲ್ಲ’ ಎಂದು ನಿಶಾಂಕ್ ಹೇಳಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಆಗಿರುವ ಹಾನಿಯನ್ನು ಕೇಂದ್ರ ಸರ್ಕಾರ ತುಂಬಿಕೊಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳು ಕೇಂದ್ರ ಸರ್ಕಾರದ ಸಂಪೂರ್ಣ ಹಣಕಾಸಿನ ನೆರವಿನಿಂದ ಕಾರ್ಯನಿರ್ವಹಿಸುತ್ತಿವೆ. ಹಣ ಬೇಕಿದ್ದರೆ ಯುಜಿಸಿಯನ್ನು ಸಂಪರ್ಕಿಸಬೇಕು’ ಎಂದಿದ್ದಾರೆ.

‘ಇಂತಹ ಘಟನೆಗಳನ್ನು ನಿಭಾಯಿಸಲು ವಿಶ್ವವಿದ್ಯಾಲಯಗಳು ಸಮರ್ಥವಾಗಿವೆ. ಕೇಂದ್ರೀಯ ವಿಶ್ವವಿದ್ಯಾಲಯಗಳು ಶಾಸನಬದ್ಧ ಸ್ವಾಯತ್ತ ಸಂಸ್ಥೆಗಳು. ಎಲ್ಲ ಆಡಳಿತ ಹಾಗೂ ಶೈಕ್ಷಣಿಕ ನಿರ್ಧಾರಗಳನ್ನು ಕಾರ್ಯಕಾರಿ ಮಂಡಳಿ ಮತ್ತು ಶೈಕ್ಷಣಿಕ ಮಂಡಳಿಯ ಅನುಮೋದನೆ ಪಡೆದು ವಿಶ್ವವಿದ್ಯಾಲಯಗಳು ತೆಗೆದುಕೊಳ್ಳಬಹುದು. ವಿಶ್ವವಿದ್ಯಾಲಯದ ಕಾಯ್ದೆ ಪ್ರಕಾರ, ವಿಶ್ವವಿದ್ಯಾಲಯದ ಕಾರ್ಯಕಾರಿ ಮಂಡಳಿಯು ಆದಾಯ ಹಾಗೂ ಸ್ವತ್ತುಗಳನ್ನು ನಿರ್ವಹಿಸುವ ಅಧಿಕಾರ ಹೊಂದಿದೆ’ ಎಂದು ಸಚಿವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.