ನವದೆಹಲಿ: ‘ಭ್ರೂಣವನ್ನು ಹತ್ಯೆ ಮಾಡಲು ಆಗುವುದಿಲ್ಲ. ಹೀಗಾಗಿ, 26 ವಾರಗಳ ಗರ್ಭಿಣಿಯು ಗರ್ಭಪಾತ ಮಾಡಿಸಿಕೊಳ್ಳುವ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು’ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
‘ಮಹಿಳೆಯ ಸ್ವಾಯತ್ತೆಗೆ ಮಹತ್ವ ನೀಡಲೇಬೇಕು. ಆದರೆ ಇನ್ನೂ ಜನಿಸಿರದ ಮಗುವಿನ ಕಥೆ ಏನು? ಇಲ್ಲಿ ಆ ಮಗುವಿನ ಪರವಾಗಿ ವಾದ ಮಂಡಿಸಲು ಯಾರೂ ಇಲ್ಲ. ಹುಟ್ಟಿರದ ಮಗುವಿನ ಹಕ್ಕುಗಳನ್ನು ಇಲ್ಲಿ ಸಮಾನ ನೆಲೆಯಲ್ಲಿ ಕಾಣುವುದು ಹೇಗೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರು ಇರುವ ನ್ಯಾಯಪೀಠವು ಕೇಳಿತು.
ಇಂತಹ ಪ್ರಕರಣಗಳಲ್ಲಿ ಮಹಿಳೆಯರ ಆಯ್ಕೆಯ ಹಕ್ಕು ಪ್ರಶ್ನಾತೀತವೇನೂ ಅಲ್ಲ. ಇಲ್ಲಿ ಗರ್ಭಪಾತಕ್ಕೆ ಅವಕಾಶ ಕೊಡುವುದು ವೈದ್ಯಕೀಯ ದೃಷ್ಟಿಯಿಂದ ಅನೈತಿಕವಾಗುತ್ತದೆ ಎಂದು ಕೇಂದ್ರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ಚರ್ಯಾ ಭಾಟಿ ಹೇಳಿದರು.
ಅರ್ಜಿದಾರ ಮಹಿಳೆಯು ಖಿನ್ನತೆ ಹಾಗೂ ಇತರ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಕೆಗೆ ತನ್ನ ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿಲ್ಲ. ಆ ಇಬ್ಬರನ್ನು ಅರ್ಜಿದಾರರ ಅತ್ತೆ ನೋಡಿಕೊಳ್ಳುತ್ತಿದ್ದಾರೆ. ಮೂರನೆಯ ಮಗುವಿನ ಜನನವಾದಲ್ಲಿ ಎರಡು ಜೀವಗಳು ಹಾಳಾಗುತ್ತವೆ ಎಂದು ಆಕೆಯ ಪರ ವಕೀಲರು ಹೇಳಿದರು.
ವಿವಾಹಿತ ಮಹಿಳೆಯು 26 ವಾರಗಳ ಗರ್ಭಿಣಿ. ಆಕೆಗೆ ಗರ್ಭಪಾತಕ್ಕೆ ಅವಕಾಶ ಕಲ್ಪಿಸಬೇಕೇ ಎಂಬ ವಿಚಾರವಾಗಿ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ನ್ಯಾಯಪೀಠವು ಭಿನ್ನ ನಿಲುವಿನ ಆದೇಶ ನೀಡಿದೆ. ಹೀಗಾಗಿ, ಈ ಪ್ರಕರಣವು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರ ಮುಂದೆ ಬಂದಿದೆ. ವಿಚಾರಣೆಯನ್ನು ಮುಂದೂಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.