ನವದೆಹಲಿ: ಯಾವುದೇ ಪ್ರಕರಣದ ಕುರಿತು ಕೆಲವು ಪತ್ರಗಳ ಆಧಾರದಲ್ಲಿ ಅಥವಾ ಸೂಕ್ತ ಕಾರಣಗಳನ್ನು ದಾಖಲಿಸದೆ ಸಿಬಿಐ ತನಿಖೆಗೆ ಆದೇಶಿಸಲು ಹೈಕೋರ್ಟ್ ತನ್ನ ಅಧಿಕಾರವನ್ನು ಚಲಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಯಾವುದೇ ನೇಮಕಾತಿ ಪ್ರಕ್ರಿಯೆಯನ್ನು ಅನುಸರಿಸದೆಯೇ ಗೂರ್ಖಾ ಪ್ರದೇಶದ ಆಡಳಿತದಲ್ಲಿ ಅತಿಥಿ ಶಿಕ್ಷಕರನ್ನು ಕಾಯಂಗೊಳಿಸಲು ಉಸ್ತುವಾರಿ ಸಚಿವರು ಪತ್ರ ಬರೆದಿದ್ದರೆಂದು ಆರೋಪಿಸಲಾಗಿತ್ತು. ಈ ಬಗ್ಗೆ ಸಿಬಿಐನ ಎಸ್ಐಟಿ ತನಿಖೆ ಕುರಿತು ಕಲ್ಕತ್ತ ಹೈಕೋರ್ಟ್‌ನ ಏ.9 ಹಾಗೂ 19ರ ಆದೇಶಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠವು ರದ್ದುಪಡಿಸಿದೆ.
‘ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ಹೈಕೋರ್ಟ್ ತನ್ನ ಅಧಿಕಾರವನ್ನು ಚಲಾಯಿಸುವಾಗ ಸಿಬಿಐಗೆ ತನಿಖೆಯನ್ನು ವಹಿಸುವ ಅಧಿಕಾರವನ್ನು ಹೊಂದಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಯಾವುದೇ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ರಾಜ್ಯ ಪೊಲೀಸರ ತನಿಖೆ ನ್ಯಾಯಯುತವಾಗಿಲ್ಲ ಅಥವಾ ಪಕ್ಷಪಾತವಾಗಿದೆ ಎಂದಾಗ ಮಾತ್ರ ಸಿಬಿಐ ತನಿಖೆಗೆ ವಹಿಸಬೇಕೆಂಬ ತರ್ಕಕ್ಕೆ ಬರಬೇಕು’ ಎಂದು ನ್ಯಾಯಪೀಠ ಹೇಳಿದೆ.
ಕೇವಲ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಹೈಕೋರ್ಟ್ ಸಿಬಿಐಗೆ ತನಿಖೆಗೆ ಆದೇಶಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರಂತರವಾಗಿ ಅಭಿಪ್ರಾಯಪಟ್ಟಿದೆ ಎಂದು ನ್ಯಾಯಪೀಠ ತಿಳಿಸಿದೆ.
ಏಪ್ರಿಲ್ 29ರಂದು ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳ ಪಾತ್ರದ ಕುರಿತಂತೆ ಸಿಬಿಐ ತನಿಖೆಗೆ ನಿರ್ದೇಶಿಸಿದ್ದ ಕಲ್ಕತ್ತ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.