ನವದೆಹಲಿ: ಮಾತೃತ್ವ ಅಥವಾ ಪಿತೃತ್ವ ಕುರಿತು ನಿರ್ಧರಿಸುವುದಕ್ಕೆ ಸಂಬಂಧಿಸಿ ದೇಶದಾದ್ಯಂತ ಡಿಎನ್‌ಎ ಪರೀಕ್ಷೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿತು.
ವಿಚಾರಣೆಗಾಗಿ ಅರ್ಜಿಯೊಂದು ತನ್ನ ಮುಂದೆ ಬಂದ ವೇಳೆ, ನ್ಯಾಯಮೂರ್ತಿಗಳಾದ ಸಂಜಯ್‌ಕಿಶನ್ ಕೌಲ್ ಹಾಗೂ ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠ ಈ ನಿರ್ಧಾರ ಪ್ರಕಟಿಸಿತು.
‘ಅರ್ಜಿಯಲ್ಲಿ ಉಲ್ಲೇಖಿಸಿರುವ ವಿಷಯಕ್ಕೆ ಸಂಬಂಧಿಸಿ, ಇಡೀ ದೇಶಕ್ಕೆ ಅನ್ವಯಿಸುವಂತೆ ಆದೇಶ ನೀಡುವುದು ಕಷ್ಟ’ ಎಂದು ನ್ಯಾಯಪೀಠ ಹೇಳಿತು.
‘ನ್ಯಾಯಾಲಯಗಳೇ ಇಡೀ ವ್ಯವಸ್ಥೆಯನ್ನು ಮುನ್ನಡೆಸಲು ಸಾಧ್ಯವಿಲ್ಲ. ತನ್ನ ಮುಂದೆ ಬರುವ ಪ್ರಕರಣಗಳಲ್ಲಿನ ವಿಷಯಕ್ಕೆ ಸಂಬಂಧಿಸಿ ಮಾತ್ರ ನ್ಯಾಯನಿರ್ಣಯ ಮಾಡಲು ಸಾಧ್ಯ’ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿತು.
‘ಇದು ಯಾವ ರೀತಿಯ ಅರ್ಜಿ? ದೇಶವ್ಯಾಪಿ ಡಿಎನ್‌ಎ ಪರೀಕ್ಷೆ ನಡೆಸಬೇಕು ಎಂದು ಬಯಸುವಿರಾ ’ ಎಂದು ಸ್ವತಃ ಹಾಜರಿದ್ದ ಅರ್ಜಿದಾರನನ್ನು ಉದ್ದೇಶಿಸಿ ಕೇಳಿದ ನ್ಯಾಯಪೀಠ, ‘ವೈಯಕ್ತಿಕವಾಗಿ ನೀವು ಯಾವುದಾದರೂ ವ್ಯಾಜ್ಯ ಎದುರಿಸುತ್ತಿದ್ದೀರಾ’ ಎಂದೂ ಪ್ರಶ್ನಿಸಿತು.
ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರ, ಈ ವಿಚಾರವಾಗಿ ಕಳೆದ ಏಳು ವರ್ಷಗಳಿಂದ ವಿವಾದ ಇದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
‘ಅರ್ಜಿದಾರರಿಗೆ ಸಂಬಂಧಿಸಿದ ವ್ಯಾಜ್ಯವೊಂದು ಇತ್ಯರ್ಥವಾಗದೇ ಬಾಕಿ ಉಳಿದಿದೆ ಎಂಬ ಕಾರಣಕ್ಕೆ ದೇಶದಾದ್ಯಂತ ಡಿಎನ್‌ಎ ಪರೀಕ್ಷೆ ನಡೆಸುವಂತೆ ನಿರ್ದೇಶನ ನೀಡಲಾಗದು’ ಎಂದು ನ್ಯಾಯಪೀಠ ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.