ನವದೆಹಲಿ: ಸ್ಪೈಸ್‌ಜೆಟ್ ವಿಮಾನದ ಒಳಗೆ ಸಿಗರೆಟ್ ಹೊತ್ತಿಸಿದ ಸಾಮಾಜಿಕ ಜಾಲತಾಣ ‘ಇನ್‌ಫ್ಲುಯೆನ್ಸರ್’ ಬಾಬ್ಬಿ ಕಟಾರಿಯ ವಿರುದ್ಧ ದೆಹಲಿ ಪೊಲೀಸರು ಎಪ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಪ್ರಯಾಣದ ವೇಳೆ ಭದ್ರತೆ ಮತ್ತು ಸುರಕ್ಷತಾ ಕ್ರಮಗಳನ್ನು ಕಟಾರಿಯಾ ಉಲ್ಲಂಘಿಸಿದ್ದಾರೆ ಎಂದು ಆಗಸ್ಟ್ 13ರಂದು ಸ್ಪೈಸ್‌ಜೆಟ್ ಆಡಳಿತ ಮಂಡಳಿ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.2022ರ ಜನವರಿಯಲ್ಲಿ ಕಟಾರಿಯ ದುಬೈನಿಂದ ದೆಹಲಿಗೆ ಸ್ಪೈಸ್‌ಜೆಟ್‌ನ ವಿಮಾನವೊಂದರಲ್ಲಿ ಆಗಮಿಸಿದ್ದರು. ಪ್ರಯಾಣದ ವೇಳೆ ತೆಗೆದಿದ್ದ ಚಿತ್ರಗಳು ಮತ್ತು ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವರು ಹರಿಬಿಟ್ಟಿದ್ದರು. ಸಿಗರೆಟ್ ಮತ್ತು ಲೈಟರ್‌ಅನ್ನು ಅವರು ಕೈಯಲ್ಲಿ ಹಿಡಿದಿರುವುದು ಚಿತ್ರಗಳಲ್ಲಿ ಕಂಡುಬಂದಿದೆ. ಇದು ಸುರಕ್ಷತಾ ನಿಯಮದ ಉಲ್ಲಂಘನೆ ಆಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಕಟಾರಿಯ ವಿರುದ್ಧ ಜನವರಿ 24ರಂದೇ ಗುರುಗ್ರಾಮದ ಉದ್ಯೋಗ ವಿಹಾರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಈ ಮೊಕದ್ದಮೆಯು ಆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರದ ಕಾರಣ ದೆಹಲಿ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಿಸಬೇಕಾಯಿತು ಎಂದು ಸ್ಪೈಸ್‌ಜೆಟ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.