ಲಖನೌ: ನಮಾಜ್ ನಿಷೇಧಿಸಬೇಕು ಎಂದು ಹೇಳಿಕೆ ನೀಡಿದ ‘ಅಖಿಲ ಭಾರತೀಯ ಹಿಂದೂ ಮಹಾಸಭಾ’ದ ರಾಷ್ಟ್ರೀಯ ಕಾರ್ಯದರ್ಶಿ ಮಹಾಮಂಡಲೇಶ್ವರ್ ಅನ್ನಪೂರ್ಣ ಭಾರತಿ ಅಲಿಯಾಸ್ ಪೂಜಾ ಶಕುನ್ ಪಾಂಡೆ ವಿರುದ್ಧ ಅಲೀಗಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೂಜಾ ಶಕುನ್ ಪಾಂಡೆಗೆ ಅಲೀಗಡದ ಹೆಚ್ಚುವರಿ ನಗರ ಮ್ಯಾಜಿಸ್ಟ್ರೇಟರು ನೋಟಿಸ್ ನೀಡಿದ್ದಾರೆ.
ನೋಟಿಸ್‌ಗೆ ಉತ್ತರಿಸಿರುವ ಪಾಂಡೆ, ಸತ್ಯವನ್ನು ಹೇಳಿದ್ದರಿಂದ ಯಾವುದೇ ಧರ್ಮದವರ ಭಾವನೆಗಳಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ. ತಮ್ಮ ಹೇಳಿಕೆಯು ಪ್ರಚೋದನಾಕಾರಿಯಲ್ಲ ಎಂದೂ ಅವರು ಸಮರ್ಥಿಸಿಕೊಂಡಿದ್ದಾರೆ.
‘ಪೂಜಾ ಶಕುನ್ ಪಾಂಡೆ ವಿರುದ್ಧ ಅಲೀಗಡದ ಗಾಂಧಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ, 153ಬಿ, 295ಎ ಹಾಗೂ 505ರ ಅಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಅಲೀಗಡ ಎಸ್‌ಎಸ್‌ಪಿ ಕಲಾನಿಧಿ ನೈಥನಿ ತಿಳಿಸಿದ್ದಾರೆ.
‘ತನಿಖೆ ನಡೆಯುತ್ತಿದೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಇದರ ಹೊರತಾಗಿ, ಸಂಬಂಧಪಟ್ಟ ಮ್ಯಾಜಿಸ್ಟ್ರೇಟರೂ ನೋಟಿಸ್ ನೀಡಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಪಾಂಡೆ ವಿರುದ್ಧ ಪ್ರಕರಣ ದಾಖಲಿಸಿರುವುದಕ್ಕೆ ‘ಅಖಿಲ ಭಾರತೀಯ ಹಿಂದೂ ಮಹಾಸಭಾ’ದ ರಾಷ್ಟ್ರೀಯ ವಕ್ತಾರ ಅಶೋಕ್ ಪಾಂಡೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.