ADVERTISEMENT

ನ್ಯಾಯಾಲಯಗಳ ಮೇಲ್ವಿಚಾರಣೆಯಲ್ಲಿ ನಡೆಯುವ ತನಿಖೆ ಹೆಚ್ಚು ಫಲಪ್ರದ: ನ್ಯಾ.ಚಂದ್ರಚೂಡ್

ಪೆಹ್ಲು ಖಾನ್ ಹತ್ಯೆ ಪ್ರಕರಣದ ತನಿಖೆಗೆ ಪ್ರತಿಕ್ರಿಯೆ

ಪಿಟಿಐ
Published 18 ಆಗಸ್ಟ್ 2019, 14:20 IST
Last Updated 18 ಆಗಸ್ಟ್ 2019, 14:20 IST
ನ್ಯಾಯಮೂರ್ತಿ ಧನಂಜಯ ಚಂದ್ರಚೂಡ್
ನ್ಯಾಯಮೂರ್ತಿ ಧನಂಜಯ ಚಂದ್ರಚೂಡ್   

ಮುಂಬೈ: ‘ನ್ಯಾಯಾಲಯಗಳ ಮೇಲ್ವಿಚಾರಣೆಯಲ್ಲಿ ನಡೆಯುವ ತನಿಖೆಗಳು ಹೆಚ್ಚು ಫಲಪ್ರದವಾಗಿರುತ್ತವೆ’ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ್ ಅವರು ಹೇಳಿದ್ದಾರೆ. ಪೆಹ್ಲು ಖಾನ್ ಹತ್ಯೆ ಪ್ರಕರಣದಲ್ಲಿ ಎಲ್ಲಾ ಆರೋಪಿಗಳು ಖುಲಾಸೆಯಾದ ವಿಚಾರವಾಗಿ ಅವರು ಈ ಮಾತು ಹೇಳಿದ್ದಾರೆ.

ಶನಿವಾರಇಲ್ಲಿ ನಡೆದ ಸಂವಾದದಲ್ಲಿ ಅವರು ಈ ಅಭಿಪ್ರಾಯಪಟ್ಟಿದ್ದಾರೆ.

‘ಪೊಲೀಸರು ಅಥವಾ ತನಿಖಾಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡದೇ ಇದ್ದಾಗ ಅಥವಾ ಅವರಿಗೆ ತನಿಖೆಯ ಸಾಮರ್ಥ್ಯವೇ ಇಲ್ಲದಿದ್ದಾಗ ಅಥವಾ ಉದ್ದೇಶಪೂರ್ವಕವಾಗಿ ತನಿಖೆಯ ಹಾದಿತಪ್ಪಿಸಿದಾಗ ಆರೋಪಿಗಳು ಖುಲಾಸೆಯಾಗುವ ಸಂದರ್ಭ ಬರುತ್ತದೆ. ಇಂತಹದ್ದು ಪದೇ ಪದೇ ಆಗುತ್ತಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ‘ಆರೋಪಿಗಳು ಖುಲಾಸೆಯಾಗುವುದು ಏಕೆ’ ಎಂದು ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ ಅವರು ಈ ಮಾತು ಹೇಳಿದ್ದಾರೆ.

ADVERTISEMENT

‘ನ್ಯಾಯಮೂರ್ತಿಗಳು ಸಾಕ್ಷ್ಯಗಳ ಆಧಾರದಲ್ಲೇ ಪ್ರಕರಣವನ್ನು ಇತ್ಯರ್ಥಪಡಿಸಬೇಕಾಗುತ್ತದೆ. ಇದು ಅತ್ಯಂತ ಯಾತನಾಮಯವಾದ ಕೆಲಸ’ ಎಂದು ಅವರು ಹೇಳಿದ್ದಾರೆ.

‘ಸರಿಯಾದ ಸಂದರ್ಭದಲ್ಲಿ, ತನಿಖೆಯ ಸೂಕ್ತ ಹಂತದಲ್ಲಿ ಪ್ರಕರಣಗಳು ನ್ಯಾಯಾಲಯದ ಗಮನಕ್ಕೆ ಬರಬೇಕು. ಆಗ ತನಿಖೆ ಸಮರ್ಪಕವಾಗಿ ನಡೆಯುವಂತೆ ಎಚ್ಚರವಹಿಸಬಹುದು. ಕಠುವಾ ಅತ್ಯಾಚಾರ–ಹತ್ಯೆ ಪ್ರಕರಣದ ತನಿಖೆಯಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸಿದ್ದರಿಂದಲೇ ತನಿಖೆ ಸಮರ್ಪಕವಾಗಿ ನಡೆಯಿತು. ಆದರೆ ದೇಶದಲ್ಲಿ ದಾಖಲಾಗುವ ಎಲ್ಲಾ ಪ್ರಕರಣಗಳ ತನಿಖೆಯ ಮೇಲ್ವಿಚಾರಣೆಯನ್ನು ನ್ಯಾಯಾಲಯಗಳು ನಡೆಸುವುದು ಸಾಧ್ಯವಿಲ್ಲ’ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.