ನವದೆಹಲಿ: ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿಯೊಬ್ಬರಿಂದ ಲಂಚ ಪಡೆದ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸಂಸದೆ ಮಹುವಾ ಮೋಯಿತ್ರಾ ಅವರಿಗೆ ಅಕ್ಟೋಬರ್ 31ರಂದು ವಿಚಾರಣೆಗೆ ಹಾಜರಾಗುವಂತೆ ಲೋಕಸಭೆಯ ನೀತಿ ನಿಯಮ ಸಮಿತಿ ಸೂಚಿಸಿದೆ.
ಸಮಿತಿಯ ಸಭೆ ಇಂದು (ಗುರುವಾರ, ಅಕ್ಟೋಬರ್ 26ರಂದು) ನಡೆದಿದೆ. ಸಮಿತಿಯು ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ವಿನೋದ್ ಕುಮಾರ್ ಸೊಂಕರ್ ಅವರು, ತನಿಖೆಗೆ ನೆರವಾಗುವಂತೆ ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಐಟಿ ಸಚಿವಾಲಯವನ್ನು ಕೋರಿದ್ದಾರೆ.
ಅಕ್ಟೋಬರ್ 31ರಂದು ವಿಚಾರಣೆಗೆ ಹಾಜರಾಗುವಂತೆ ಮೋಯಿತ್ರಾ ಅವರಿಗೆ ಸೂಚಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಮೊಯಿತ್ರಾ ಅವರು ಸದನದಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿಯೊಬ್ಬರಿಂದ ಲಂಚ ಪಡೆದಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಆರೋಪಿಸಿದ್ದರು. ಅಲ್ಲದೆ ಈ ಬಗ್ಗೆ ತನಿಖಾ ಸಮಿತಿ ರಚನೆ ಮಾಡಬೇಕು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಿದ್ದರು.
ದುಬೆ ಅವರ ದೂರನ್ನು, ಬಿರ್ಲಾ ಅವರು ನೀತಿ ನಿಯಮ ಸಮಿತಿಗೆ ಒಪ್ಪಿಸಿದ್ದರು.
ಸಮಿತಿಯು ಇಂದು ದುಬೆ ಹಾಗೂ ವಕೀಲ ಜೈ ಅನಂತ್ ದೇಹದ್ರಾಯ್ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.