ಹೈದರಾಬಾದ್: ‘ಮತಕ್ಕಾಗಿ ಕಾಸು’ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಅವರು ಅ. 16ರಂದು ಖುದ್ದು ಹಾಜರಾಗುವಂತೆ ನಗರ ನ್ಯಾಯಾಲಯ ಮಂಗಳವಾರ ನಿರ್ದೇಶಿಸಿದೆ.
2015ರಲ್ಲಿ ಶಾಸಕರೊಬ್ಬರಿಗೆ ಲಂಚ ನೀಡಿದ ಪ್ರಕರಣದಲ್ಲಿ ಈವರೆಗೂ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಹಣದ ಅಕ್ರಮ ವರ್ಗಾವಣೆ ಪ್ರಕರಣವಾದ ಇದರ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದ್ದು, ಇದೊಂದು ‘ಮತಕ್ಕಾಗಿ ಕಾಸು’ ಪ್ರಕರಣ ಎಂದಿದೆ. ಈ ಪ್ರಕರಣದಲ್ಲಿ ರೇವಂತ ರೆಡ್ಡಿ ಸೇರಿದಂತೆ ಇತರ ಐವರು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿದೆ. ಮಂಗಳವಾರ ನಡೆದ ವಿಚಾರಣೆ ಸಂದರ್ಭದಲ್ಲಿ ನಾಲ್ಕನೇ ಆರೋಪಿ ಹಾಜರಿದ್ದರೂ, ರೇವಂತ ರೆಡ್ಡಿ ಸೇರಿದಂತೆ ಇತರರು ಗೈರಾಗಿದ್ದರು.
2015ರ ಮೇ 31ರಂದು ರೇವಂತ ರೆಡ್ಡಿ ಅವರು ತೆಲುಗು ದೇಶಂ ಪಕ್ಷದಲ್ಲಿದ್ದರು. ನಾಮನಿರ್ದೇಶಿತ ಶಾಸಕ ಎಲ್ವಿಸ್ ಸ್ಟೀಫನ್‌ಸನ್ ಅವರಿಗೆ ₹50 ಲಕ್ಷ ಲಂಚ ನೀಡುವಾಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇವರನ್ನು ಬಂಧಿಸಿತ್ತು. ಬಂಧಿತರಲ್ಲಿ ಇವರೊಂದಿಗೆ ಇತರರೂ ಇದ್ದರು. ಇವರೆಲ್ಲರಿಗೂ ನಂತರ ಜಾಮೀನು ಮಂಜೂರಾಗಿತ್ತು.
ಆರೋಪಿಗಳ ವಿರುದ್ಧ ಧ್ವನಿ ಹಾಗೂ ವಿಡಿಯೊ ಸಾಕ್ಷಿಗಳಿವೆ ಎಂದೂ ಹಾಗೂ ಜತೆಗೆ ₹50 ಲಕ್ಷವನ್ನೂ ವಶಕ್ಕೆ ಪಡೆಯಲಾಗಿದೆ ಎಂದೂ ಇಡಿ ಹೇಳಿತ್ತು. ಇದನ್ನು ಆಧರಿಸಿ 2021ರಲ್ಲಿ ರೇವಂತ ರೆಡ್ಡಿ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿತ್ತು.
‘ಲಂಚದ ಮೊತ್ತದಲ್ಲಿ ಹಣದ ಅಕ್ರಮ ವರ್ಗಾವಣೆ ನಡೆಸುವ ಮೂಲಕ ಅಪರಾಧ ಕೃತ್ಯಗಳನ್ನು ಇವರು ಎಸಗಿದ್ದಾರೆ. ಇದು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ನಡಿ ಅಪರಾಧ’ ಎಂದು ಜಾರಿ ನಿರ್ದೇಶನಾಲಯ ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.