ADVERTISEMENT

ದೇವಾಲಯದಲ್ಲಿ ಡೋಲು ಬಾರಿಸಲಿಲ್ಲ ಎಂದು SC ಕುಟುಂಬಗಳಿಗೆ ಗ್ರಾಮದಿಂದಲೇ ಬಹಿಷ್ಕಾರ!

ಉತ್ತರಾಖಂಡ

ಪಿಟಿಐ
Published 18 ಜುಲೈ 2024, 6:17 IST
Last Updated 18 ಜುಲೈ 2024, 6:17 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಗೋಪೇಶ್ವರ (ಉತ್ತರಾಖಂಡ): ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ಅನಾರೋಗ್ಯದಿಂದಾಗಿ ದೇವಾಲಯದಲ್ಲಿ ಡೋಲು ಬಾರಿಸಲಿಲ್ಲ ಎಂಬ ಕಾರಣಕ್ಕೆ, ಆತನ ಇಡೀ ಸಮುದಾಯವನ್ನು ಗ್ರಾಮದಿಂದಲೇ ಬಹಿಷ್ಕರಿಸಿರುವ ಪ್ರಕರಣ ಚಮೋಲಿ ಜಿಲ್ಲೆಯಲ್ಲಿ ವರದಿಯಾಗಿದೆ.

ಭಾರತ ಮತ್ತು ಚೀನಾ ಗಡಿ ಭಾಗದಲ್ಲಿರುವ ನಿತಿ ಕಣಿವೆ ಪ್ರದೇಶದಲ್ಲಿನ ಸುಭಯ್‌ ಗ್ರಾಮದ ಪಂಚಾಯಿತಿಯಲ್ಲಿ ಭಾನುವಾರ ಬಹಿಷ್ಕಾರದ ಘೋಷಣೆ ಮಾಡಲಾಗಿದೆ.

ADVERTISEMENT

ಪರಿಶಿಷ್ಟ ಜಾತಿಗೆ ಸೇರಿದ ಹತ್ತಕ್ಕೂ ಹೆಚ್ಚು ಕುಟುಂಬಗಳು ಹಳ್ಳಿಯಲ್ಲಿದ್ದು, ತಲೆಮಾರುಗಳಿಂದ ಗ್ರಾಮದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಡೋಲು ಬಾರಿಸುತ್ತಾ ಬಂದಿವೆ.

ಅನಾರೋಗ್ಯಕ್ಕೊಳಗಾಗಿದ್ದ ಪುಷ್ಕರ್‌ ಲಾಲ್‌ ಎಂಬವರಿಗೆ, ಇತ್ತೀಚೆಗೆ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ದೇವಾಲಯದಲ್ಲಿ ಡೋಲು ಬಾರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಸ್ಥಳೀಯ ಪಂಚಾಯಿತಿಯು ಅವರ ಇಡೀ ಸಮುದಾಯಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದೆ.

ಪಂಚಾಯಿತಿಯ ಸದಸ್ಯರೊಬ್ಬರು ಬಹಿಷ್ಕಾರ ಘೋಷಣೆ ಮಾಡುತ್ತಿರುವುದು ಹಾಗೂ ಆದೇಶ ಪಾಲಿಸದಿದ್ದರೆ ಇಂತಹದೇ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಗ್ರಾಮಸ್ಥರನ್ನು ಬೆದರಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಪಂಚಾಯಿತಿ ಆದೇಶದ ಪ್ರಕಾರ, ಗ್ರಾಮಕ್ಕೆ ಸೇರಿದ ಅರಣ್ಯ ಮತ್ತು ಜಲ ಮೂಲಗಳನ್ನು ಬಳಸದಂತೆ, ಊರಿನ ಅಂಗಡಿಗಳಿಂದ ಅಗತ್ಯ ಸಾಮಗ್ರಿಗಳನ್ನು ಖರೀದಿಸದಂತೆ, ಸಾರ್ವಜನಿಕ ವಾಹನಗಳನ್ನು ಉಪಯೋಗಿಸದಂತೆ ಹಾಗೂ ದೇವಾಲಯಗಳಿಗೆ ಭೇಟಿ ನೀಡದಂತೆ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳಿಗೆ ನಿರ್ಬಂಧ ವಿಧಿಸಲಾಗಿದೆ.

ಈ ಸಂಬಂಧ ಜೋಶಿಮಠ ಪೊಲೀಸ್‌ ಠಾಣೆ ಮೆಟ್ಟಿಲೇರಿರುವ ಸಂತ್ರಸ್ತ ಕುಟುಂಬಗಳು, ಆದೇಶ ಮಾಡಿದ ರಾಮಕೃಷ್ಣ ಖಂಡ್ವಾಲ್‌ ಮತ್ತು ಯಶ್ವೀರ್‌ ಸಿಂಗ್‌ ಎಂಬವರ ವಿರುದ್ಧ ದೂರು ನೀಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.