ನವದೆಹಲಿ: ದೇಶದ ಯಾವುದೇ ಜೈಲಿನಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಸಹಿಸಲಾಗದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದ್ದು, ಅಂತಹ ಭೇದಭಾವಕ್ಕೆ ಅವಕಾಶ ಮಾಡಿಕೊಡುವ ಜೈಲು ಕೈಪಿಡಿಯಲ್ಲಿರುವ ನಿಬಂಧನೆಗಳನ್ನು ರದ್ದುಗೊಳಿಸಿತು.
ದೇಶದ ಕೆಲವು ರಾಜ್ಯಗಳ ಜೈಲು ಕೈಪಿಡಿಗಳು ಜಾತಿ ಆಧಾರಿತ ತಾರತಮ್ಯ ಪ್ರೋತ್ಸಾಹಿಸುತ್ತಿವೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ಮಹತ್ವದ ತೀರ್ಪು ಪ್ರಕಟಿಸಿದೆ.
‘ಕಾರಾಗೃಹಗಳಲ್ಲಿ ಕೈದಿಗಳಿಗೆ ಕೆಲಸದ ಹಂಚಿಕೆ ಮತ್ತು ಅವರನ್ನು ಯಾವ ಕೊಠಡಿಯಲ್ಲಿ ಇರಿಸಬೇಕು ಎಂಬುದನ್ನು ಜಾತಿಯ ಆಧಾರದಲ್ಲಿ ನಿರ್ಧರಿಸುವುದನ್ನು ಒಪ್ಪಲಾಗದು’ ಎಂದು ಪೀಠ ಹೇಳಿತು.
ಈಗ ನೀಡಿರುವ ತೀರ್ಪಿನ ಅನುಸಾರ ಮೂರು ತಿಂಗಳೊಳಗೆ ಜೈಲು ಕೈಪಿಡಿಗಳಲ್ಲಿ ತಿದ್ದುಪಡಿ ಮಾಡುವಂತೆ 10 ರಾಜ್ಯಗಳಿಗೆ ನಿರ್ದೇಶನ ನೀಡಿದ ಪೀಠ, ಅನುಪಾಲನಾ ವರದಿ ಸಲ್ಲಿಸುವಂತೆ ತಾಕೀತು ಮಾಡಿತು.
ಜಾತಿ, ಲಿಂಗ ಅಥವಾ ಅಂಗವೈಕ್ಯಲದ ಆಧಾರದ ಮೇಲೆ ಜೈಲಿನಲ್ಲಿ ಯಾವುದೇ ತಾರತಮ್ಯ ಕಂಡುಬಂದರೆ ಮೂರು ತಿಂಗಳ ಬಳಿಕ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನ ಸೂಕ್ತ ಪೀಠದ ಮುಂದೆ ಪಟ್ಟಿ ಮಾಡುವಂತೆ ರಿಜಿಸ್ಟ್ರಿಗೆ ನಿರ್ದೇಶನ ನೀಡಿತು.
‘ಸಮಾಜದ ಅಂಚಿನಲ್ಲಿರುವ ಜಾತಿಯಿಂದ ಬಂದವರಿಗೆ ಸ್ವಚ್ಛತೆಯ ಕೆಲಸಗಳನ್ನು ವಹಿಸುವುದು ಮತ್ತು ಮೇಲ್ವರ್ಗದಿಂದ ಬಂದವರಿಗೆ ಅಡುಗೆಯ ಕೆಲಸವನ್ನು ಕೊಡುವುದು ಸಂವಿಧಾನದ 15ನೇ ವಿಧಿಯ ಉಲ್ಲಂಘನೆಯಾಗಿದೆ’ ಎಂದು ಹೇಳಿತು.
ಉತ್ತರ ಪ್ರದೇಶದ ಜೈಲು ಕೈಪಿಡಿಯಲ್ಲಿರುವ ಜಾತಿ ತಾರತಮ್ಯದ ನಿಯಮಗಳನ್ನು ಉಲ್ಲೇಖಿಸಿದ ಪೀಠ, ‘ಯಾವುದೇ ವರ್ಗವು ಸ್ಕ್ಯಾವೆಂಜರ್ ಅಥವಾ ಕೀಳು ಕೆಲಸ ಮಾಡುವ ವರ್ಗವಾಗಿ ಹುಟ್ಟಿರುವುದಿಲ್ಲ. ಕೈದಿಗಳನ್ನು ಅವರ ಜಾತಿಯ ಅಧಾರದಲ್ಲಿ ಅಡುಗೆ ಮಾಡುವ ಮತ್ತು ಅಡುಗೆ ಮಾಡದ ವರ್ಗದವರು ಎಂದು ಬೇರ್ಪಡಿಸುವುದು ಅಸ್ಪೃಶ್ಯತೆಯ ಆಚರಣೆಯಲ್ಲದೆ ಬೇರೇನೂ ಅಲ್ಲ’ ಎಂದಿತು.
ಮಹಾರಾಷ್ಟ್ರದ ಕಲ್ಯಾಣ್‌ನ ನಿವಾಸಿ ಸುಕನ್ಯಾ ಶಾಂತಾ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್, ಇದೇ ವರ್ಷ ಜನವರಿಯಲ್ಲಿ ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಒಳಗೊಂಡಂತೆ 10 ರಾಜ್ಯಗಳು ಹಾಗೂ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು.
ಪೀಠ ಹೇಳಿದ್ದು...
ಜೈಲಿನಲ್ಲಿರುವವರೂ ಘನತೆಯಿಂದ ಬದುಕುವ ಹಕ್ಕು ಹೊಂದಿರುವರು
ಕೈದಿಗಳನ್ನು ಅಮಾನವೀಯವಾಗಿ ನಡೆಸಿಕೊಂಡರೆ ಆಯಾ ರಾಜ್ಯಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು.
ಶೌಚ ಗುಂಡಿ ಒಳಚರಂಡಿ ಸ್ವಚ್ಛಗೊಳಿಸುವಂತಹ ಅಪಾಯಕಾರಿ ಕೆಲಸಗಳಲ್ಲಿ ಕೈದಿಗಳನ್ನು ತೊಡಗಿಸುವಂತಿಲ್ಲ.
ಪರಿಶಿಷ್ಟ ಜಾತಿ ಪರಿಶಿಷ್ಟ ಸಮುದಾಯ ಹಾಗೂ ಬುಡಕಟ್ಟು ಸಮುದಾಯದವರ ವಿರುದ್ಧದ ತಾರತಮ್ಯ ಮುಂದುವರಿದಿದ್ದು ಅವರ ರಕ್ಷಣೆಗಿರುವ ಕಾನೂನುಗಳ ಅನುಷ್ಠಾನವನ್ನು ನ್ಯಾಯಾಲಯಗಳು ಖಾತರಿಪಡಿಸಿಕೊಳ್ಳಬೇಕು.
ಜಾತಿ ಆಧಾರಿತ ತಾರತಮ್ಯದ ವಿರುದ್ಧದ ಹೋರಾಟವನ್ನು ರಾತ್ರೋರಾತ್ರಿ ಗೆಲ್ಲಲು ಆಗದು. ಅದಕ್ಕೆ ನಿರಂತರ ಪ್ರಯತ್ನ ಮತ್ತು ಸಮರ್ಪಣೆಯ ಅಗತ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.