ಪಾಲಕ್ಕಾಡ್ (ಕೇರಳ): ‘ನಿರ್ದಿಷ್ಟ ಜಾತಿ ಅಥವಾ ಸಮುದಾಯಗಳ ಕಲ್ಯಾಣಕ್ಕಾಗಿ ಅವುಗಳ ಮಾಹಿತಿ ಸಂಗ್ರಹಿಸಿದರೆ ಯಾವುದೇ ರೀತಿಯ ಆಕ್ಷೇಪ ಇಲ್ಲ. ಆದರೆ, ಈ ಮಾಹಿತಿ ರಾಜಕೀಯ ಲಾಭಕ್ಕಾಗಿ ಬಳಕೆಯಾಗದಿರಲಿ‘ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಸೋಮವಾರ ತಿಳಿಸಿದೆ.
‘ಜಾತಿ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಗಳು ಹಿಂದೂ ಸಮಾಜದಲ್ಲಿ ತುಂಬಾ ಸೂಕ್ಷತೆಯನ್ನು ಹೊಂದಿವೆ. ನಮ್ಮ ರಾಷ್ಟ್ರೀಯ ಏಕತೆ ಮತ್ತು ಭಾವೈಕ್ಯತೆಗೆ ಸಂಬಂಧಿಸಿದ ಪ್ರಮುಖ ವಿಚಾರವಾಗಿರುವ ಜಾತಿ ಗಣತಿಯನ್ನು ಗಂಭೀರವಾಗಿ ನಿಭಾಯಿಸಬೇಕು’ ಎಂದು ಆರ್‌ಎಸ್‌ಎಸ್‌ನ ಮಾಧ್ಯಮ ಘಟಕದ ಮುಖ್ಯಸ್ಥ ಸುನಿಲ್ ಅಂಬೇಕರ್ ಅವರು ಹೇಳಿದ್ದಾರೆ.
ಪಾಲಕ್ಕಾಡ್‌ನಲ್ಲಿ ನಡೆದ ಆರ್‌ಎಸ್‌ಎಸ್ ಮತ್ತು ಸಹವರ್ತಿ ಸಂಘಟನೆಗಳ ಹಿರಿಯ ಪದಾಧಿಕಾರಿಗಳ ವಾರ್ಷಿಕ ಸಭೆ ‘ಸಮನ್ವಯ ಬೈಠಕ್’ ಮುಕ್ತಾಯಗೊಂಡ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿರ್ದಿಷ್ಟ ಸಮುದಾಯಗಳು ಅಥವಾ ಜಾತಿಗಳ ಹಿಂದುಳಿದಿರುವಿಕೆಯನ್ನು ಪರಿಹರಿಸುವುದಕ್ಕಾಗಿ ಗಣತಿಯ ಮಾಹಿತಿ ಅಗತ್ಯವಾಗಿದೆ. ಅದಕ್ಕಾಗಿ ಸರ್ಕಾರಕ್ಕೆ ಅಂಕಿ–ಆಂಶಗಳು ಬೇಕಾಗುತ್ತವೆ. ಈ ಮೊದಲು ಸಹ ಮಾಹಿತಿ ಪಡೆಯಲಾಗಿದೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ, ಎಚ್ಚರಿಕೆಯೂ ಅಗತ್ಯ’ ಎಂದರು.
ತಮಿಳುನಾಡಿನಲ್ಲಿ ಮತಾಂತರ ಹೆಚ್ಚಳ:
‘ತಮಿಳುನಾಡಿನಲ್ಲಿ ಮಿಷನರಿಗಳಿಂದ ಮತಾಂತರ ಪ್ರಕ್ರಿಯೆಯು ಹೆಚ್ಚಾಗಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಅಂಬೇಕರ್ ಹೇಳಿದ್ದಾರೆ.
‘ಮತಾಂತರವು ತುಂಬ ಭಯಾನಕವಾಗಿದ್ದು, ಈ ಬಗ್ಗೆ ತಳಮಟ್ಟದಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ತಮಿಳುನಾಡಿನಲ್ಲಿ ಮತಾಂತರ ಪ್ರಕ್ರಿಯೆ ಅಧಿಕವಾಗಿರುವ ಬಗ್ಗೆ ಹಲವು ಸಂಘಟನೆಗಳು ವರದಿ ನೀಡಿವೆ’ ಎಂದರು.
ಮಹಿಳೆಯರಿಗೆ ತ್ವರಿತವಾಗಿ ನ್ಯಾಯ ಸಿಗಲಿ:
‘ದೌರ್ಜನ್ಯಕ್ಕೊಳಗಾದ ಸ್ತ್ರೀಯರಿಗೆ ತ್ವರಿತವಾಗಿ ನ್ಯಾಯ ಒದಗಿಸಬೇಕು’ ಎಂದು ಆರ್‌ಎಸ್‌ಎಸ್ ಆಗ್ರಹಿಸಿದೆ.
‘ಪಶ್ಚಿಮ ಬಂಗಾಳದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರವು ದುರದೃಷ್ಟಕರವಾಗಿದ್ದು, ಇದನ್ನು ಆರ್‌ಎಸ್‌ಎಸ್ ಖಂಡಿಸುತ್ತದೆ’ ಎಂದು ಅಂಬೇಕರ್ ಹೇಳಿದ್ದಾರೆ.
‘ಸಮನ್ವಯ ಬೈಠಕ್‌ನಲ್ಲಿ ಈ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗಿದೆ. ದೇಶದಲ್ಲಿ ಈ ರೀತಿಯ ಕೃತ್ಯಗಳು ಹೆಚ್ಚಾಗುತ್ತಿವೆ. ಇದರ ನಿಯಂತ್ರಣಕ್ಕೆ ಸರ್ಕಾರ, ಕಾನೂನು ಮತ್ತು ಅಧಿಕಾರಿಗಳು ಯಾವ ಪಾತ್ರ ವಹಿಸಿಕೊಳ್ಳಬಹುದು ಎಂಬುದರ ಬಗ್ಗೆ ವಿಮರ್ಶೆ ನಡೆಸಲಾಗಿದೆ’ ಎಂದರು
ಬಾಂಗ್ಲಾದೊಂದಿಗೆ ಕೇಂದ್ರಸರ್ಕಾರ ಮಾತುಕತೆ ನಡೆಸಲಿ
‘ಬಾಂಗ್ಲಾದೇಶದಲ್ಲಿನ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಸುರಕ್ಷತೆ ಬಗ್ಗೆ ಅಲ್ಲಿನ ಸರ್ಕಾರದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಮಾತುಕತೆ ನಡೆಸಲಿ’ ಎಂದು ಆರ್‌ಎಸ್‌ಎಸ್ ಆಗ್ರಹಿಸಿದೆ. ‘ಬಾಂಗ್ಲಾದಲ್ಲಿನ ಪರಿಸ್ಥಿತಿಯು ತುಂಬಾ ಸೂಕ್ಷ ವಿಚಾರವಾಗಿದ್ದು ಸಮನ್ವಯ ಬೈಠಕ್‌ನಲ್ಲಿ ಹಲವು ಸಂಘಟನೆಗಳು ಈ ಬಗ್ಗೆ ಸಮಗ್ರ ವರದಿಗಳನ್ನು ನೀಡಿವೆ’ ಎಂದು ಸುನಿಲ್ ಅಂಬೇಕರ್ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.