ರಾಂಚಿ:ಗೋವುಗಳ ಅಕ್ರಮ ಸಾಗಣೆಯಲ್ಲಿ ತೊಡಗಿದ್ದವರ ವಾಹನ ತಪಾಸಣೆ ನಡೆಸುತ್ತಿದ್ದ ಮಹಿಳಾ ಸಬ್‌ಇನ್ಸ್‌ಪೆಕ್ಟರ್ ಒಬ್ಬರ ಮೇಲೆಯೇ ಪಿಕಪ್ ವಾಹನ ಹರಿಸಿ ಹತ್ಯೆ ಮಾಡಿರುವ ಘಟನೆ ಬುಧವಾರ ಜಾರ್ಖಂಡ್‌ನ ರಾಜಧಾನಿಯಾದ ಇಲ್ಲಿ ನಡೆದಿದೆ. ಮಂಗಳವಾರವಷ್ಟೇ ಹರಿಯಾಣದ ನೂಹ್‌ನಲ್ಲಿ ಡಿವೈಎಸ್‌ಪಿ ಸುರೇಂದ್ರ ಸಿಂಗ್ ಬಿಷ್ಣೋಯಿ ಅವರನ್ನು ಗಣಿ ಮಾಫಿಯಾ ಇದೇ ರೀತಿ ಹತ್ಯೆ ಮಾಡಿತ್ತು.
‘ಸಂಧ್ಯಾ ಟೋಪ್ನೊ (32) ಹತ್ಯೆಯಾದವರು. ರಾಂಚಿಯ ಹೊರವಲಯದಲ್ಲಿರುವ ತುಪುದಾನಾ ಪ್ರದೇಶದಲ್ಲಿ ಸಂಧ್ಯಾ ಅವರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ದನಗಳನ್ನು ಸಾಗಿಸುತ್ತಿದ್ದ ವಾಹನವೊಂದು ವೇಗವಾಗಿ ಬಂದು ಸಂಧ್ಯಾ ಅವರ ಮೇಲೆ ಹರಿದಿದೆ’ ಎಂದು ಪೊಲೀಸರು ವಿವರಿಸಿದರು.
‘ಸಂಧ್ಯಾ ಅವರನ್ನು ತಕ್ಷಣವೇ ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಆರ್‌ಐಎಂಎಸ್) ಆಸ್ಪತ್ರೆಗೆ ಕರೆದೊಯ್ಯಲಾಯಿತು. ತೀವ್ರವಾಗಿ ಗಾಯಗೊಂಡಿದ್ದ ಅವರು ಮಾರ್ಗಮಧ್ಯೆಯಲ್ಲೇ ತೀರಿಕೊಂಡರು’ ಎಂದು ತುಪುದಾನಾ ಪೊಲೀಸ್ ಠಾಣೆಯ ಠಾಣಾಧಿಕಾರಿ ಕನ್ಹಯ್ಯ ಸಿಂಗ್ ತಿಳಿಸಿದರು.
‘ಗೋ ಸಾಗಣೆಯಲ್ಲಿ ತೊಡಗಿರುವವರೇ ಈ ಕೃತ್ಯ ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.ಇಲ್ಲಿಯವರೆಗೆ ಒಬ್ಬರನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಇತರರಿಗಾಗಿ ಹುಡುಕಾಟ ನಡೆದಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ’ ಎಂದು ರಾಂಚಿ ಎಸ್ಪಿ ಅನ್ಶುಮಾನ್ ಕುಮಾರ್ ಹೇಳಿದರು.
‘ಸಬ್‌ಇನ್ಸ್‌ಪೆಕ್ಟರ್ ಅವರು ವಾಹನವನ್ನು ತಡೆಯಲು ದೂರದಿಂದಲೇ ಕೈಬೀಸಿದರು. ಆದರೂ, ವಾಹನವು ಅವರ ಮೇಲೆ ಹರಿಯಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ವಾಹನ ಹರಿಸಿ ಪೊಲೀಸ್ ಹತ್ಯೆ(ಆನಂದ್ ವರದಿ): ತಪಾಸಣೆ ವೇಳೆ ವಾಹನವನ್ನು ತಡೆದ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರ ಮೇಲೆ ಟ್ರಕ್ ಹರಿದ ಘಟನೆ ಗುಜರಾತ್‌ನ ಆನಂದ್ ಜಿಲ್ಲೆಯಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ.
ಬೊರಸದ್ ಪಟ್ಟಣದ ಹೆದ್ದಾರಿ ಬಳಿ ರಾತ್ರಿ 1 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕರಣ್‌ಸಿಂಹ ರಾಜ್ (40) ಹತ್ಯೆಯಾದವರು.
‘ಚಾಲಕನು ಟ್ರಕ್‌ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಚಾಲಕನಿಗಾಗಿ ಹುಡುಕಾಟ ನಡೆದಿದೆ’ ಎಂದು ಡಿವೈಎಸ್‌ಪಿ ಡಿ.ಎಚ್. ದೇಸಾಯಿ ಮಾಹಿತಿ ನೀಡಿದರು.
ಗೋವು ಅಕ್ರಮ ಸಾಗಾಟ: ರಾಜಕೀಯ ಮೇಲಾಟ:ರಾಂಚಿಯಲ್ಲಿ ನಡೆದ ಸಂಧ್ಯಾ ಅವರ ಹತ್ಯೆಯು ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ.
ಜೆಎಂಎಂ ನೇತೃತ್ವದ ಸಮ್ಮಿಶ್ರ ಸರ್ಕಾರವು ಗೋವು ಅಕ್ರಮ ಸಾಗಣೆಗೆ ಬೆಂಬಲ ನೀಡುತ್ತಿದೆ ಎಂದು ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಆರೋಪಿಸಿದರೆ, ಇಲ್ಲಸಲ್ಲದ ಆರೋಪ ಮಾಡಿ, ಕರ್ತವ್ಯನಿರತ ಪೊಲೀಸರ ಆತ್ಮವಿಶ್ವಾಸವನ್ನು ಬಿಜೆಪಿ ಕುಗ್ಗಿಸುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.
‘ಹೇಮಂತ ಸೊರೇನ್ ಅವರು ಜಾರ್ಖಂಡ್‌ನ ಮುಖ್ಯಮಂತ್ರಿ ಆದಾಗಿನಿಂದ ಗೋವುಗಳ ಅಕ್ರಮ ಸಾಗಣೆ ಪ್ರಕರಣಗಳು ಹೆಚ್ಚಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ತುಪುದಾನಾದಲ್ಲಿ ನಡೆದ ಘಟನೆಯು ರಾಜ್ಯವು ಜಂಗಲ್‌ರಾಜ್ ಕಡೆಗೆ ಸಾಗುತ್ತಿರುವುದರ ಉದಾಹರಣೆಯಾಗಿದೆ’ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದೀಪಕ್ ಪ್ರಕಾಶ್ ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರಾಜೀವ್ ರಾಜನ್ ಪ್ರಸಾದ್, ‘ಪೊಲೀಸರು ಅಕ್ರಮ ತಡೆಯಲು ಬುದ್ಧರಾಗಿದ್ದಾರೆ. ಬೇಜವಾಬ್ದಾರಿ ಹೇಳಿಕೆಗಳ ಮೂಲಕ ಬಿಜೆಪಿಯು ಪೊಲೀಸರ ಮನೋಬಲವನ್ನು ಕುಗ್ಗಿಸುವ ಯತ್ನ ನಡೆಸುತ್ತಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.