ADVERTISEMENT

ತೆಲಂಗಾಣ: ವಿದ್ಯಾರ್ಥಿ ಮೇಲೆ ಬಿಜೆಪಿ ಮುಖಂಡನ ಮಗನಿಂದ ಹಲ್ಲೆ, ಎಫ್‌ಐಆರ್ ದಾಖಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜನವರಿ 2023, 7:28 IST
Last Updated 18 ಜನವರಿ 2023, 7:28 IST
ವಿದ್ಯಾರ್ಥಿಯ ಮೇಲೆ ತೆಲಂಗಾಣ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಹಲ್ಲೆ ನಡೆಸುತ್ತಿರುವ ದೃಶ್ಯ.
ವಿದ್ಯಾರ್ಥಿಯ ಮೇಲೆ ತೆಲಂಗಾಣ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಹಲ್ಲೆ ನಡೆಸುತ್ತಿರುವ ದೃಶ್ಯ.    

ಹೈದರಾಬಾದ್: ತೆಲಂಗಾಣ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಸಹ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಘಟನೆ ಕುರಿತು ಮಹೀಂದ್ರಾ ವಿಶ್ವವಿದ್ಯಾಲಯ ನೀಡಿದ ದೂರಿನ ಆಧಾರದ ಮೇಲೆ ಬಂಡಿ ಭಗೀರಥ್ ಸಾಯಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶ್ರೀರಾಮ್‌ ಮೇಲೆ ಭಗೀರಥ್ ಸಾಯಿ ಹಲ್ಲೆ ನಡೆಸುತ್ತಿರುವ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ADVERTISEMENT

ಭಗೀರಥ್ ಸಾಯಿ ಸ್ನೇಹಿತರೊಂದಿಗೆ ಸೇರಿ ಹಾಸ್ಟೆಲ್ ಕೊಠಡಿಯಲ್ಲಿ ಶ್ರೀರಾಮ್‌ನನ್ನು ನಿಂದಿಸಿದ್ದು, ಥಳಿಸಿದ್ದಾರೆ. ಬಳಿಕ ಕಾಲೇಜು ಆವರಣದಲ್ಲಿಯೂ ಶ್ರೀರಾಮ್‌ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶ್ರೀರಾಮ್ ನನ್ನ ಪರಿಚಯಸ್ಥ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಭಗೀರಥ್ ಹೇಳಿಕೊಂಡಿದ್ದಾರೆ.

‘ನಾನು ಯುವತಿಗೆ ಆಕ್ಷೇಪಾರ್ಹ ಸಂದೇಶ ಕಳುಹಿಸಿದ್ದೆ. ಇದೇ ವಿಚಾರವಾಗಿ ಚರ್ಚಿಸಲು ಭಗೀರಥ್‌ ನನ್ನನ್ನು ಸಂಪರ್ಕಿಸಿದ್ದ. ಆಗ ನಾನು ಆತನ ಬಳಿಯೂ ಅನುಚಿತವಾಗಿ ವರ್ತಿಸಿದ್ದರಿಂದ ಭಗೀರಥ್ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ’ ಎಂದು ಶ್ರೀರಾಮ್ ಹೇಳಿಕೆ ನೀಡಿದ್ದಾನೆ.

ಎರಡು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಬಳಿಕ ರಾಜಿ ಮಾಡಿಕೊಂಡಿದ್ದೇವೆ ಎಂದು ಶ್ರೀರಾಮ್ ಹೇಳಿಕೊಂಡಿದ್ದಾರೆ.

ಕೆಸಿಆರ್ ಪಿತೂರಿ ಆರೋಪ: ನನ್ನ ವಿರುದ್ಧ ರಾಜಕೀಯವಾಗಿ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರು ಪಿತೂರಿ ನಡೆಸಿದ್ದಾರೆ ಎಂದು ಸಂಜಯ್ ಕುಮಾರ್ ಆರೋಪಿಸಿದ್ದಾರೆ.

‘ವಿದ್ಯಾರ್ಥಿಗಳು ಜಗಳವಾಡುವುದು ಸಹಜ. ತಮ್ಮ ತಪ್ಪಿನ ಅರಿವಾದ ಮೇಲೆ ತಿದ್ದಿಕೊಳ್ಳುತ್ತಾರೆ. ಮಕ್ಕಳನ್ನು ರಾಜಕೀಯದಿಂದ ದೂರವಿಡಬೇಕು. ಕೆಸಿಆರ್‌ ಆದೇಶದ ಮೇರೆಗೆ ವಿಶ್ವವಿದ್ಯಾಲಯ ನನ್ನ ಬಾಯಿ ಮುಚ್ಚಿಸಲು ಮುಂದಾಗಿದೆ’ ಎಂದು ಸಂಜಯ್ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.