ADVERTISEMENT

ಕಾವೇರಿ ಅಣೆಕಟ್ಟುಗಳಿಗೆ ಶೇ 42.54ರಷ್ಟು ಕಡಿಮೆ ನೀರು: ಜಲನಿರ್ವಹಣಾ ಪ್ರಾಧಿಕಾರ

30 ವರ್ಷಗಳ ಸರಾಸರಿಗೆ ಹೋಲಿಸಿದರೆ ಈ ವರ್ಷ ಕುಗ್ಗಿರುವ ಒಳಹರಿವು ಪ್ರಮಾಣ –ಸಿಡಬ್ಲ್ಯುಎಂಎ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2023, 16:31 IST
Last Updated 15 ಆಗಸ್ಟ್ 2023, 16:31 IST
ಜಲಾಶಯ( ಸಾಂಕೇತಿಕ ಚಿತ್ರ)
ಜಲಾಶಯ( ಸಾಂಕೇತಿಕ ಚಿತ್ರ)   

ನವದೆಹಲಿ: ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ, ದುರ್ಬಲ ಮುಂಗಾರಿನ ಕಾರಣ ಕರ್ನಾಟಕದಲ್ಲಿ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಿಗೆ ನೀರಿನ ಒಳಹರಿವು ಶೇ 42.54ರಷ್ಟು ತಗ್ಗಿದೆ ಎಂದು ಕಾವೇರಿ ಜಲನಿರ್ವಹಣಾ ಪ್ರಾಧಿಕಾರವು (ಸಿಡಬ್ಲ್ಯುಎಂಎ) ತಿಳಿಸಿದೆ.

ಕಳೆದ ವಾರ ನಡೆದಿದ್ದ ಪ್ರಾಧಿಕಾರದ ಸಭೆಗೆ ಸಿದ್ಧಪಡಿಸಿದ್ದ ಕಾರ್ಯಸೂಚಿಯಲ್ಲಿ ಈ ಅಂಶವನ್ನು ಉಲ್ಲೇಖಿಸಲಾಗಿದೆ. ಆ ಪ್ರಕಾರ, ಜೂನ್‌ 1, 2023ರಿಂದ ಆಗಸ್ಟ್‌ 9, 2023ರವರೆಗೆ ಜಲಾನಯನ ಭಾಗದ ಅಣೆಕಟ್ಟುಗಳಾದ ಕಬಿನಿ, ಹಾರಂಗಿ, ಹೇಮಾವತಿ ಮತ್ತು ಕೆಆರ್‌ಎಸ್‌ನಲ್ಲಿ ಒಳ ಹರಿವಿನ ಪ್ರಮಾಣ ಕಳೆದ 30 ವರ್ಷಗಳ ಸರಾಸರಿಗೆ ಹೋಲಿಸಿದರೆ ಶೇ 42.54ರಷ್ಟು ಇಳಿಮುಖವಾಗಿದೆ ಎಂದು ವಿವರಿಸಿದೆ.

ಜೂನ್ 1 ರಿಂದ ಆಗಸ್ಟ್ 10ರ ಅವಧಿಯಲ್ಲಿ ಕೆಆರ್‌ಎಸ್‌ ವ್ಯಾಪ್ತಿಯ ಜಲಾನಯನ ಪ್ರದೇಶಗಳಲ್ಲಿ ಶೇ 23ರಷ್ಟು, ಕಬಿನಿ ವ್ಯಾಪ್ತಿಯಲ್ಲಿ ಶೇ 22ರಷ್ಟು ಮಳೆ ಕೊರತೆಯಾಗಿದೆ. ತಮಿಳುನಾಡು ಮತ್ತು ಕರ್ನಾಟಕ ಒಳಗೊಂಡು ಇಡೀ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ವಾಡಿಕೆಗಿಂತಲೂ ಶೇ 19ರಷ್ಟು ಕಡಿಮೆಯಾಗಿದೆ ಎಂದು ಕಾರ್ಯಸೂಚಿಯಲ್ಲಿ ಉಲ್ಲೇಖಿಸಲಾಗಿದೆ. 

ಕಾವೇರಿ ನದಿ ಪಾತ್ರದ ನಾಲ್ಕು ಜಲಾಶಯಗಳಲ್ಲಿ ಒಟ್ಟು 24.352 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ 69.77 ಟಿಎಂಸಿ ಅಡಿಯಷ್ಟು ನೀರಿನ ಸಂಗ್ರಹವಿದೆ ಎಂದು ಕರ್ನಾಟಕ ಸರ್ಕಾರವು ಅಂದು ಸಭೆಯ ಗಮನಕ್ಕೆ ತಂದಿತ್ತು.

ತಮಿಳುನಾಡು ಸರ್ಕಾರ ಕೃಷಿ ಉದ್ದೇಶಕ್ಕಾಗಿ ಜೂನ್‌ 12ರಿಂದ ನೀರು ಹರಿಸಲು ಆರಂಭಿಸಿದ್ದರಿಂದ ಮೆಟ್ಟೂರು ಜಲಾಶಯದಲ್ಲಿ ಸಂಗ್ರಹವಿದ್ದ ನೀರಿನ ಪ್ರಮಾಣ ಆಗಸ್ಟ್‌ 7ರ ವೇಳೆಗೆ 22.86 ಟಿಎಂಸಿ ಅಡಿಗೆ ತಲುಪಿತ್ತು. ಮಾಪನ ಕೇಂದ್ರವಾದ ಬಿಳಿಗುಂಡ್ಲುವಿನಿಂದ ಮೆಟ್ಟೂರು ಜಲಾಶಯವರೆಗಿನ ಪ್ರದೇಶದಲ್ಲಿ ವಾಡಿಕೆಯಷ್ಟು ಮಳೆಯಾಗಿದೆ. ಹೀಗಾಗಿ, ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಹೆಚ್ಚುವರಿ ಅಂದರೆ, 83.83 ಟಿಎಂಸಿ ಅಡಿಗೂ ಹೆಚ್ಚು ನೀರು ಸೇರಿದೆ. ಆದರೆ, ತಮಿಳುನಾಡು ಸರ್ಕಾರ ಜೂನ್‌ 12 ರಿಂದ ಆಗಸ್ಟ್ 7ವರೆಗಿನ ಅವಧಿಯಲ್ಲಿ 60.97 ಟಿಎಂಸಿ ಅಡಿಗಿಂತಲೂ ಅಧಿಕ ನೀರನ್ನು ಬಳಕೆ ಮಾಡಿದೆ ಎಂಬ ಮಾಹಿತಿಯನ್ನು ಕರ್ನಾಟಕವು ಸಿಡಬ್ಲ್ಯುಎಂಎ ಗಮನಕ್ಕೆ ತಂದಿದೆ.

ADVERTISEMENT

ತಮಿಳುನಾಡಿನಲ್ಲಿ 1,85,100 ಎಕರೆ ವಿಸ್ತೀರ್ಣದ ಭೂಮಿಯಲ್ಲಿನ ಕುರುವೈ ಬೆಳೆಗೆ ಒಟ್ಟು 32.27 ಟಿಎಂಸಿ ಅಡಿ ನೀರು ಅಗತ್ಯ ಎಂದು ಕಾವೇರಿ ಜಲವಿವಾದ ನ್ಯಾಯಮಂಡಳಿಯು ಹಂಚಿಕೆ ಮಾಡಿತ್ತು. ಆದರೆ, ತಮಿಳುನಾಡು ಸರ್ಕಾರ ಕುರುವೈ ಬೆಳೆಗೆ ಹಂಚಿಕೆ ಮಾಡಿದ್ದಕ್ಕಿಂತ ಎರಡು ಪಟ್ಟು ಹೆಚ್ಚು ನೀರು ಬಳಕೆ ಮಾಡಿದೆ ಎಂದು ಕರ್ನಾಟಕ ಪ್ರತಿಪಾದಿಸಿತ್ತು.

ಕರ್ನಾಟಕದಲ್ಲಿ ಕುಡಿಯುವ ನೀರು ಉದ್ದೇಶಕ್ಕೆ ಅಗತ್ಯವಿರುವ ನೀರನ್ನು ಹೊರತುಪಡಿಸಿ, ನ್ಯಾಯಮಂಡಳಿಯು ನಿಗದಿಪಡಿಸಿದ ನೀರಾವರಿ ಪ್ರದೇಶದ ಶೇ 50ರಷ್ಟು ಭೂಮಿಗೆ ಒದಗಿಸುವಷ್ಟು ನೀರು ಸಂಗ್ರಹದಲ್ಲಿಲ್ಲ. ಇದುವರೆಗೂ ಕೃಷಿ ಉದ್ದೇಶಗಳಿಗೆ ಕರ್ನಾಟಕದಲ್ಲಿ ನೀರು ಹರಿಸಿಲ್ಲ. ರೈತರು ಈಗಾಗಲೇ ಕಾಲುವೆಗಳ ಮೂಲಕ ನೀರು ಹರಿಸುವಂತೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ, ಸೀಮಿತ ಪ್ರದೇಶಕ್ಕೆ ಅನ್ವಯಿಸಿ ನೀರಾವರಿ ಉದ್ದೇಶಕ್ಕಾಗಿ ನೀರು ಹರಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸರ್ಕಾರ ಸಿಡಬ್ಲ್ಯುಎಂಎಗೆ ಮಾಹಿತಿ ನೀಡಿತ್ತು.

ಸಿಡಬ್ಲ್ಯುಎಂಎ ತನ್ನ ಆದೇಶದಲ್ಲಿ ಆಗಸ್ಟ್ 12 ರಿಂದ ಜಾರಿಗೊಳಿಸಿ 15 ದಿನ ಕಾಲ ನಿತ್ಯ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ 10 ಸಾವಿರ ಕ್ಯೂಸೆಕ್‌ ಹರಿವು ದಾಖಲಾಗುವಂತೆ ನೀರು ಹರಿಸಬೇಕು ಎಂದು ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.