ADVERTISEMENT

Cauvery: ತಮಿಳುನಾಡಿಗೆ ಮತ್ತೆ 3 ಸಾವಿರ ಕ್ಯೂಸೆಕ್ ನೀರು ಹರಿಸಲು ಸಮಿತಿ ಶಿಫಾರಸು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಸೆಪ್ಟೆಂಬರ್ 2023, 9:33 IST
Last Updated 26 ಸೆಪ್ಟೆಂಬರ್ 2023, 9:33 IST
<div class="paragraphs"><p>ಕೆಆರ್ ಎಸ್ ಜಲಾನಯದಿಂದ ನೀರನ್ನು ತಮಿಳುನಾಡಿಗೆ ಹರಿಬಿಡುತ್ತಿರುವುದರಿಂದ ಮಳವಳ್ಳಿ ತಾಲೂಕಿನ ಶಿವನಸಮುದ್ರ(ಬ್ಲಫ್) ಬಳಿಯ ವಿಶ್ವವಿಖ್ಯಾತ ಗಗನಚುಕ್ಕಿ ಜಲಪಾತ ಮೈತುಂಬಿ ಹರಿಯುತ್ತಿದೆ.</p></div>

ಕೆಆರ್ ಎಸ್ ಜಲಾನಯದಿಂದ ನೀರನ್ನು ತಮಿಳುನಾಡಿಗೆ ಹರಿಬಿಡುತ್ತಿರುವುದರಿಂದ ಮಳವಳ್ಳಿ ತಾಲೂಕಿನ ಶಿವನಸಮುದ್ರ(ಬ್ಲಫ್) ಬಳಿಯ ವಿಶ್ವವಿಖ್ಯಾತ ಗಗನಚುಕ್ಕಿ ಜಲಪಾತ ಮೈತುಂಬಿ ಹರಿಯುತ್ತಿದೆ.

   

ನವದೆಹಲಿ: ತಮಿಳುನಾಡಿಗೆ ಕರ್ನಾಟಕವು ಸೆಪ್ಟೆಂಬರ್ 28 ರಿಂದ ಅಕ್ಟೋಬರ್‌ 15 ರ
ವರೆಗೆ ಪ್ರತಿದಿನ 3 ಸಾವಿರ ಕ್ಯೂಸೆಕ್‌ ಕಾವೇರಿ ನೀರು ಬಿಡಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಮಂಗಳವಾರ ಶಿಫಾರಸು ಮಾಡಿದೆ. ಶಿಫಾರಸಿನ ಪ್ರಕಾರ, ತಮಿಳುನಾಡಿಗೆ ರಾಜ್ಯವು 18 ದಿನಗಳಲ್ಲಿ 4.61 ಟಿಎಂಸಿ ಅಡಿಯಷ್ಟು ನೀರು ಹರಿಸಬೇಕು. 

ಇಲ್ಲಿ ನಡೆದ ಸಮಿತಿಯ 87ನೇ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಜಲ
ಸಂಪನ್ಮೂಲ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗಿಯಾಗಿ ತಮ್ಮ ರಾಜ್ಯ ಎದುರಿಸುತ್ತಿರುವ ಸಂಕಷ್ಟ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದರು.   ಸಮಿತಿಯು ತನ್ನ ಶಿಫಾರಸನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಕಳುಹಿಸುತ್ತದೆ.

ADVERTISEMENT

ಪ್ರಾಧಿಕಾರವು ಕರ್ನಾಟಕದಿಂದ ತಮಿಳುನಾಡಿಗೆ ಬಿಡುಗಡೆಯ ಪ್ರಮಾಣದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. ಪ್ರಾಧಿಕಾರದ ಸಭೆ ಒಂದೆರಡು ದಿನಗಳಲ್ಲಿ ನಡೆಯುವ ಸಾಧ್ಯತೆ ಇದೆ. 

ಸೆಪ್ಟೆಂಬರ್‌ 25ರ ವರೆಗೆ ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಸಂಚಿತ ಒಳಹರಿವಿನ ಕೊರತೆಯು ಶೇ 53ರಷ್ಟು ಇದೆ. ರಾಜ್ಯದ 161 ತಾಲ್ಲೂಕುಗಳನ್ನು ತೀವ್ರ ಬರ ಪೀಡಿತ ಮತ್ತು 34 ತಾಲ್ಲೂಕುಗಳನ್ನು ಮಧ್ಯಮ ಬರ ಪೀಡಿತ ಎಂದು ಘೋಷಿಸಿದೆ. ಈ ಪೈಕಿ 32 ತೀವ್ರ ಬರ ಪೀಡಿತ ತಾಲ್ಲೂಕುಗಳು ಮತ್ತು 15 ಮಧ್ಯಮ ಬರ ಪೀಡಿತ ತಾಲ್ಲೂಕುಗಳು ಕಾವೇರಿ ಜಲಾನಯನ ಪ್ರದೇಶದಲ್ಲಿವೆ. ಈ ಅಂಶಗಳನ್ನು ಸಮಿತಿಯು ಗಂಭೀರವಾಗಿ ಪರಿಗಣಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕರ್ನಾಟಕದ ಅಧಿಕಾರಿಗಳು ಮನವಿ ಮಾಡಿದರು. 

ಕರ್ನಾಟಕವು ತನ್ನ ಜಲಾಶಯಗಳಿಂದ ನೀರನ್ನು ಬಿಡುಗಡೆ ಮಾಡುವ ಸ್ಥಿತಿಯಲ್ಲಿಲ್ಲ ಎಂದು ಅವರು ಹೇಳಿದರು. 

ಕರ್ನಾಟಕವು ನಿತ್ಯ 12,500 ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ರಾಜ್ಯದ ಬೆಳೆಗಳು ಒಣಗಿ ಹೋಗಲಿವೆ ಎಂದು ತಮಿಳುನಾಡಿನ ಅಧಿಕಾರಿಗಳು ಹೇಳಿದರು. ಕರ್ನಾಟಕವೂ ಸಂಕಷ್ಟದ ಅನುಪಾತದ ಆಧಾರದ ಮೇಲೆ ನೀರಾವರಿ ಪೂರೈಕೆಯನ್ನು ಕಡಿಮೆ ಮಾಡಬೇಕು.
ಕರ್ನಾಟಕವು ತಕ್ಷಣವೇ ಕೊರತೆಯ ಪ್ರಮಾಣವನ್ನು ಬಿಡುಗಡೆ ಮಾಡಬೇಕು ಮತ್ತು ಸಂಕಷ್ಟದ ಅನುಪಾತಕ್ಕೆ ಅನುಗುಣವಾಗಿ ಮತ್ತಷ್ಟು ನೀರು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. 

‘ಕಾವೇರಿ ಕೊಳ್ಳದ ನಾಲ್ಕು ಜಲಾಶಯ ಗಳಿಂದ ದಿನದ ಸಹಜ ಹೊರಹರಿವಿನ ಪ್ರಮಾಣ 1,900–2,000 ಕ್ಯೂಸೆಕ್‌ನಷ್ಟು ಇದೆ. ಸಮಿತಿಯ ಶಿಫಾರಸಿನ ಪ್ರಕಾರ, ರಾಜ್ಯವು ಹೆಚ್ಚುವರಿಯಾಗಿ 1,000 ಕ್ಯೂಸೆಕ್‌ನಷ್ಟು ಹರಿಸಬೇಕಿದೆ. ಹಿಂದಿನ ಆದೇಶಗಳಿಗೆ ಹೋಲಿಸಿದರೆ ಈಗಿನ ಶಿಫಾರಸು ರಾಜ್ಯದ ಮಟ್ಟಿಗೆ ಸ್ವಲ್ಪ ಸಮಾ ಧಾನಕರ’ ಎಂದು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. 

‘ಕಾವೇರಿ ನ್ಯಾಯಮಂಡಳಿಯ ಆದೇಶದ ಪ್ರಕಾರ, ರಾಜ್ಯವು ಮುಂಗಾರಿನ ನಾಲ್ಕು ತಿಂಗಳುಗಳಲ್ಲಿ ತಮಿಳುನಾಡಿಗೆ 110 ಟಿಎಂಸಿ ಅಡಿಗಳಷ್ಟು ನೀರು ಹರಿಸಬೇಕಿದೆ. ಈ ವರ್ಷ ರಾಜ್ಯ ಬಿಡುಗಡೆ ಮಾಡಿರುವ ನೀರಿನ ಪ್ರಮಾಣ 45 ಟಿಎಂಸಿ ಅಡಿಗಳಷ್ಟು’ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.