ಚೆನ್ನೈ: ಕರ್ನಾಟಕ ಸರ್ಕಾರವು ಕಾವೇರಿ ನೀರನ್ನು ಸಮರ್ಪಕವಾಗಿ ಬಿಡುವಂತೆ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಲು ಆಗ್ರಹಿಸಿ ತಮಿಳುನಾಡಿನ 8 ಜಿಲ್ಲೆಗಳಲ್ಲಿ ಇಂದು ಬಂದ್‌ಗೆ ಕರೆ ನೀಡಲಾಗಿದೆ.
ತಮಿಳುನಾಡಿನ ತಿರುಚಿರಪಳ್ಳಿ, ತಾಂಜಾವೂರು, ನಾಗಪಟ್ಟಣಂ ಮತ್ತು ತಿರುವಾರೂರು ಸೇರಿದಂತೆ 8 ಜಿಲ್ಲೆಗಳಲ್ಲಿ ಬಂದ್ ಹಮ್ಮಿಕೊಂಡಿದ್ದು, ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಕಾವೇರಿ ಕೊಳ್ಳದ ರಕ್ಷಣಾ ಆಂದೋಲನ ಮತ್ತು ರೈತ ಸಂಘಗಳು ಜಂಟಿಯಾಗಿ ಬಂದ್‌ಗೆ ಕರೆ ನೀಡಿದ್ದು, ಕಾವೇರಿ ಕೊಳ್ಳದ 8 ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಗಪಟ್ಟಣಂ ಜಿಲ್ಲೆಯೊಂದರಲ್ಲೇ ಸುಮಾರು 12,000 ಅಂಗಡಿಗಳನ್ನು ಮುಚ್ಚಲಾಗಿದೆ ಎಂದು ವರದಿಯಾಗಿದೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ತಮಿಳುನಾಡಿಗೆ ಅಗತ್ಯವಿರುವ ಕಾವೇರಿ ನೀರು ಹರಿಸಲು ಕರ್ನಾಟಕಕ್ಕೆ ಸೂಚಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಸೋಮವಾರ ಅಂಗೀಕರಿಸಿತ್ತು.
ನಿರ್ಣಯ ಮಂಡಿಸಿದ್ದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ‘ಕರ್ನಾಟಕ ‘ಕೃತಕ ಬಿಕ್ಕಟ್ಟು’ ಸೃಷ್ಟಿಸಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನೀರು ಬಿಡುಗಡೆ ಮಾಡುತ್ತಿಲ್ಲ’ ಎಂದು ಆರೋಪಿಸಿದ್ದರು.
ಸೆಪ್ಟೆಂಬರ್ 28ರಿಂದ ಅಕ್ಟೋಬರ್ 15ರವರೆಗೆ ಬಿಳಿಗುಂಡ್ಲು ಮಾಪನ ಕೇಂದ್ರಕ್ಕೆ ಪ್ರತಿನಿತ್ಯ 3,000 ಕ್ಯೂಸೆಕ್ ನೀರು ಬೀಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಆದೇಶಿಸಿತ್ತು. ಆದರೆ, ಕರ್ನಾಟಕದಲ್ಲಿ ಭೀಕರ ಬರಗಾಲ ಇರುವುದಾಗಿ ಉಲ್ಲೇಖಿಸಿ ತಮಿಳುನಾಡಿಗೆ ನೀರು ಹರಿಸಲು ಕರ್ನಾಟಕ ಸರ್ಕಾರ ನಿರಾಕರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.