ಚೆನ್ನೈ: ರಾಜ್ಯದ ಪಾಲಿನ ಕಾವೇರಿ ನೀರು ಹರಿಸಲು ಕರ್ನಾಟಕ ಹಿಂದೇಟು ಹಾಕುತ್ತಿದ್ದು, ಈ ವಿಚಾರದಲ್ಲಿ ಅಗತ್ಯ ಬಿದ್ದರೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಮಂಗಳವಾರ ಇಲ್ಲಿ ನಡೆದ ತಮಿಳುನಾಡು ಸರ್ವಪಕ್ಷದ ಶಾಸಕಾಂಗ ಪಕ್ಷದ ಮುಖಂಡರ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ನಿರ್ದೇಶನದ ಪ್ರಕಾರ, ತಮಿಳುನಾಡಿಗೆ ನಿತ್ಯ 1 ಟಿಎಂಸಿ ಅಡಿ ನೀರು ಬಿಡಲು ನಿರಾಕರಿಸಿರುವ ಕರ್ನಾಟಕ ಸರ್ಕಾರದ ವಿರುದ್ಧ ಸಭೆಯು ಖಂಡನಾ ನಿರ್ಣಯ ಅಂಗೀಕರಿಸಿತು.
ಕಾವೇರಿ ನ್ಯಾಯಮಂಡಳಿ ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯಕ್ಕೆ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (ಸಿಡಬ್ಲ್ಯೂಎಂಎ) ಕರ್ನಾಟಕಕ್ಕೆ ಸೂಚನೆ ನೀಡಬೇಕು ಎಂದು ಸಭೆಯು ಮತ್ತೊಂದು ನಿರ್ಣಯ ತೆಗೆದುಕೊಂಡಿದೆ.
ತಮಿಳುನಾಡು ರಾಜ್ಯದಲ್ಲಿ ಕೃಷಿ ಚಟುವಟಿಕೆ ನಡೆಸಲು ಕಾವೇರಿ ನದಿಯಿಂದ ಕೂಡಲೇ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತರು ಹಾಗೂ ಎಡ ಪಕ್ಷಗಳ ಕಾರ್ಯಕರ್ತರು ತಿರುವರೂರ್ ಜಿಲ್ಲೆಯ ತಿರುತರೈಪುಂಡಿಯಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ತಮಿಳುನಾಡಿಗೆ ಪಾಲಿನ ಕಾವೇರಿ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ನಂತರ ಇಲ್ಲಿನ ಕರ್ನಾಟಕ ಬ್ಯಾಂಕ್ ಕಚೇರಿಯ ಮುಂದೆಯೂ ಪ್ರತಿಭಟಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಕಾರರನ್ನು ಅಲ್ಲಿಂದ ಕರೆದೊಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.