ನವದೆಹಲಿ: ₹ 20 ಲಕ್ಷ ಲಂಚ ಪಡೆದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಪ್ರಾದೇಶಿಕ ಅಧಿಕಾರಿ, ಭೋಪಾಲ್ ಮೂಲದ ನಿರ್ಮಾಣ ಸಂಸ್ಥೆ ದಿಲೀಪ್ ಬಿಲ್ಡ್‌ಕಾನ್ ಉನ್ನತ ಅಧಿಕಾರಿಗಳು ಸೇರಿದಂತೆ ಐದು ಮಂದಿಯನ್ನು ಸಿಬಿಐ ಶುಕ್ರವಾರ ಬಂಧಿಸಿದೆ.
ಬಂಧಿತರಲ್ಲಿಭಾರತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಪ್ರಾದೇಶಿಕ ಅಧಿಕಾರಿ ಅಖಿಲ್ ಅಹ್ಮದ್ (ಬೆಂಗಳೂರಿನಲ್ಲಿ ನಿಯೋಜನೆಗೊಂಡಿರುವವರು),ದಿಲೀಪ್ ಬಿಲ್ಡ್‌ಕಾನ್ ನಿರ್ಮಾಣ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರೆತನ್‌ಕರಣ್ ಸಜ್ಜಿಲಾಲ್, ಕಾರ್ಯಕಾರಿ ನಿರ್ದೇಶಕ ದೇವೇಂದ್ರ ಜೈನ್, ಉನ್ನತ ಅಧಿಕಾರಿ ಸುನೀಲ್ ಕುಮಾರ್ ವರ್ಮಾ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಜ್ ಗುಪ್ತಾ ಎಂಬುವರನ್ನೂ ಬಂಧಿಸಲಾಗಿದೆ ಎಂದು ಸಿಬಿಐ ಮಾಹಿತಿ ಮಾಡಿದೆ.
ಎನ್‌ಎಚ್‌ಎಐ ಗುತ್ತಿಗೆದಾರರು ತಮ್ಮ ಬಾಕಿ ಇರುವ ಬಿಲ್‌ಗಳನ್ನು ತೆರವುಗೊಳಿಸಲು ಮತ್ತು ಪೂರ್ಣಗೊಂಡ ಯೋಜನೆಗಳಿಗೆ ತಾತ್ಕಾಲಿಕ ವಾಣಿಜ್ಯ ಕಾರ್ಯಾಚರಣೆ ದಿನಾಂಕವನ್ನು (ಪಿಸಿಒಡಿ) ನೀಡಲು ಅಹ್ಮದ್ ಅವರು ಲಂಚ ಪಡೆಯುತ್ತಿದ್ದರು ಎಂದು ಸಿಬಿಐ ಆರೋಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಅಹ್ಮದ್ ಅವರು ಬೆಂಗಳೂರು– ಚೆನ್ನೈ ಎಕ್ಸ್‌ಪ್ರೆಸ್‌ವೇ ಪ್ಯಾಕೇಜ್ 1 ಮತ್ತು 2ರ ಅಡಿಯಲ್ಲಿ ಕರ್ನಾಟಕದ ಖಾಸಗಿ ಕಂಪನಿಯು ಕಾರ್ಯಗತಗೊಳಿಸಿದ ಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರು ಖಾಸಗಿ ಕಂಪನಿ, ಸೈಟ್ ಆಫೀಸ್, ಬೆಂಗಳೂರಿನ ಜನರಲ್ ಮ್ಯಾನೇಜರ್‌ವೊಬ್ಬರಿಂದ ‘ಪ್ರತಿಫಲಾಪೇಕ್ಷೆ’ ಬಯಸಿದ್ದರು ಎಂದು ಆರೋಪಿಸಲಾಗಿದೆ ಎಂದು ಸಿಬಿಐ ವಕ್ತಾರ ಆರ್.ಸಿ. ಜೋಶಿ ಹೇಳಿದ್ದಾರೆ.
‘ಅಹ್ಮದ್ ಪರವಾಗಿ ದೆಹಲಿಯಲ್ಲಿರುವ ಅನುಜ್ ಗುಪ್ತಾ ಅವರಿಗೆ ₹ 20 ಲಕ್ಷ ಲಂಚ ತಲುಪಿಸುವ ಕುರಿತು ಸಿಬಿಐಗೆ ಖಚಿತ ಮಾಹಿತಿ ಬರುತ್ತಿದ್ದೆಯೇ ದಾಳಿ ನಡೆಸಲು ಯೋಜನೆ ರೂಪಿಸಲಾಯಿತು.ಲಂಚ ಪಡೆಯುವಾಗ ಅನುಜ್ ಗುಪ್ತಾ ಮತ್ತು ಮತ್ತು ಖಾಸಗಿ ಕಂಪನಿಯ ಅಧಿಕಾರಿ ಸಿಕ್ಕಿಬಿದ್ದಿದ್ದಾರೆ. ಅವರಿಂದ ಹಣ ವಶಪಡಿಸಿಕೊಳ್ಳಲಾಗಿದೆ’ ಎಂದು ಜೋಶಿ ತಿಳಿಸಿದ್ದಾರೆ.
ಬಂಧನದ ನಂತರ, ಸಿಬಿಐ ಶುಕ್ರವಾರ ನವದೆಹಲಿ, ಬೆಂಗಳೂರು, ಕೊಚ್ಚಿನ್, ಗುರ್‌ಗಾಂವ್ ಮತ್ತು ಭೋಪಾಲ್‌ನ ಅನೇಕ ಸ್ಥಳಗಳಲ್ಲಿ ಶೋಧ ನಡೆಸಿತು ಎಂದು ಅವರು ಹೇಳಿದರು. ಶೋಧದ ವೇಳೆ ಸಿಬಿಐ ಇದುವರೆಗೆ ₹ 4 ಕೋಟಿ ನಗದು ವಶಪಡಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.