ನವದೆಹಲಿ: ಭಾರತ– ಬಾಂಗ್ಲಾದೇಶ ಗಡಿಯಲ್ಲಿ ಗೋವುಗಳ ಕಳ್ಳ ಸಾಗಣೆ ಮಾಡುತ್ತಿದ್ದ ಪ್ರಕರಣದ ಪ್ರಮುಖ ಆರೋಪಿ ಇನಾಮುಲ್ ಹಕ್ ಎಂಬಾತನನ್ನು ಸಿಬಿಐ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಈತನನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಆತನ ವಿರುದ್ಧ ಬಿಎಸ್‌ಎಫ್ ಸಿಬ್ಬಂದಿ ಜೊತೆಗೂಡಿ ಗೋವುಗಳ ಕಳ್ಳ ಸಾಗಣೆ ಮಾಡಿದ ಕೇಸು ದಾಖಲಾಗಿದೆ.
ಹಕ್ ಹಾಗೂ ಇತರ ಆರೋಪಿಗಳಾದ ಅನಾರುಲ್ ಎಸ್.ಕೆ, ಮೊಹಮ್ಮದ್ ಗುಲಾಂ ಮುಸ್ತಫಗೆ ನೆರವು ನೀಡಿದ ಆರೋಪದ ಮೇಲೆ 36ನೇ ಬಿಎಸ್‌ಎಫ್ ಬೆಟಾಲಿಯನ್‌ನ ಮಾಜಿ ಕಮಾಂಡೆಂಟ್ ಸತೀಶ್‌ಕುಮಾರ್ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಗುರುವಾರ ಕೋಲ್ಕತ್ತದಲ್ಲಿ ಇಬ್ಬರು ಲೆಕ್ಕಪರಿಶೋಧಕರ ಕಚೇರಿ ಹಾಗೂ ಮನೆಯಲ್ಲಿ ಶೋಧ ನಡೆಸಿದ್ದರು.
ತಮ್ಮ ವ್ಯವಹಾರ ಸುಸೂತ್ರವಾಗಿ ನಡೆಯುವಂತೆ ಗೋವುಗಳ ಕಳ್ಳ ಸಾಗಣೆ ಮಾಡುವವರು ಗಡಿಭಾಗದಲ್ಲಿ ಬಿಎಸ್‌ಎಫ್ ಹಾಗೂ ಸುಂಕ ವಸೂಲಿ ಸಿಬ್ಬಂದಿಗೆ ಲಂಚ ಕೊಡುತ್ತಾರೆ ಎಂಬ ಆರೋಪ ಇಲ್ಲಿ ಕೇಳಿಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.