ADVERTISEMENT

ಸಂದೇಶ್‌ಖಾಲಿ ಪ್ರಕರಣ: ಶಹಜಹಾನ್‌ ವಿರುದ್ಧ ಕೊಲೆ ಯತ್ನ ಆರೋಪ ಹೊರಿಸಿದ ಸಿಬಿಐ

ಪಿಟಿಐ
Published 29 ಮೇ 2024, 0:02 IST
Last Updated 29 ಮೇ 2024, 0:02 IST
<div class="paragraphs"><p>ಶಹಜಹಾನ್‌ </p></div>

ಶಹಜಹಾನ್‌

   

ನವದೆಹಲಿ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ತಂಡದ ಮೇಲೆ ನಡೆದಿದ್ದ ಗುಂಪು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಮಾನತುಗೊಂಡಿರುವ ಟಿಎಂಸಿ ಮುಖಂಡ ಶಹಜಹಾನ್‌ ಶೇಖ್‌, ಆತನ ಸಹೋದರ ಹಾಗೂ ಇತರ ಐವರ ವಿರುದ್ಧ ಸಿಬಿಐ ಕ್ರಿಮಿನಲ್‌ ಸಂಚು ಹಾಗೂ ಕೊಲೆ ಯತ್ನದ ಆರೋಪ ಹೊರಿಸಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ಸಿಬಿಐ ಸೋಮವಾರ ಮೊದಲ ಆರೋಪಪ‍ಟ್ಟಿ ಸಲ್ಲಿಸಿದೆ ಎಂದು ಹೇಳಿದ್ದಾರೆ.

ADVERTISEMENT

ಶಹಜಹಾನ್‌ ಶೇಖ್‌, ಅವರ ಸಹೋದರ ಆಲಂಗೀರ್, ಸಹಚರರಾದ ಜಿಯಾಯುದ್ದೀನ್ ಮೊಲ್ಲ, ಮಫುಜರ್ ಮೊಲ್ಲ ಹಾಗೂ ದಿಬರ್‌ಬಕ್ಷ್ ಮೊಲ್ಲ ಸೇರಿದಂತೆ ಏಳು ಜನರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಇವರ ವಿರುದ್ಧ ಐಪಿಸಿ ಸೆಕ್ಷನ್ 120ಬಿ (ಕ್ರಿಮಿನಲ್‌ ಸಂಚು), 307(ಕೊಲೆ ಯತ್ನ) ಹಾಗೂ ಗಲಭೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದ ಸೆಕ್ಷನ್‌ಗಳಡಿ ಆರೋಪ ಹೊರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಪಡಿತರ ಹಂಚಿಕೆ ಹಗರಣದ ಜೊತೆ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಶಹಜಹಾನ್‌ ಶೇಖ್‌ ಅವರ ನಿವಾಸ ಹಾಗೂ ಸಂಬಂಧಪಟ್ಟ ಸ್ಥಳಗಳಲ್ಲಿ ಶೋಧ ನಡೆಸಲು ತೆರಳಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮೇಲೆ ಗುಂಪೊಂದು ದಾಳಿ ನಡೆಸಿತ್ತು. ಶಹಜಹಾನ್‌ ಶೇಖ್‌, ಈ ದಾಳಿ ಘಟನೆಯ ಮುಖ್ಯ ಸಂಚುಕೋರ ಎಂಬುದು ತನಿಖೆಯಿಂದ ತಿಳಿದುಬಂದಿದೆ’ ಎಂದು ಸಿಬಿಐ ವಕ್ತಾರ ತಿಳಿಸಿದ್ದಾರೆ.

ಸಂದೇಶ್‌ಖಾಲಿ ಗ್ರಾಮ ಕೋಲ್ಕತ್ತದಿಂದ 80 ಕಿ.ಮೀ. ದೂರದಲ್ಲಿದೆ. ಶಹಜಹಾನ್‌ಶೇಖ್‌ ಹಾಗೂ ಆತನ ಸಹಚರರು ಭೂಕಬಳಿಕೆ ಹಾಗೂ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಗ್ರಾಮದ ಮಹಿಳೆಯರು ಆರೋಪಿಸಿದ್ದರು.

ಇ.ಡಿ ಅಧಿಕಾರಿಗಳ ಮೇಲಿನ ದಾಳಿ ಪ್ರಕರಣ ಸೇರಿದಂತೆ, ಶಹಜಹಾನ್ ವಿರುದ್ಧದ ಒಟ್ಟು ಮೂರು ಪ್ರಕರಣಗಳ ಕುರಿತ ತನಿಖೆಯನ್ನು ಸಿಬಿಐ ಜನವರಿ 5ರಂದು ಕೈಗೆತ್ತಿಕೊಂಡಿದೆ. 

ಫೆಬ್ರುವರಿ 29ರಂದು ಶಹಜಹಾನ್‌ ಶೇಖ್‌ ಅವರನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದರು. ನಂತರ, ಮಾರ್ಚ್ 6ರಂದು ಸಿಬಿಐ ಅವರನ್ನು ತನ್ನ ವಶಕ್ಕೆ ತೆಗೆದುಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.