ADVERTISEMENT

ಹೂಡಿಕೆ ವಂಚನೆ: ಸಿಬಿಐ ಶೋಧ

ಪಿಟಿಐ
Published 1 ಮೇ 2024, 16:20 IST
Last Updated 1 ಮೇ 2024, 16:20 IST
ಸಿಬಿಐ ಲಾಂಛನ
ಸಿಬಿಐ ಲಾಂಛನ   

ನವದೆಹಲಿ: ಎಚ್‌ಪಿಜೆಡ್‌ ಟೋಕನ್ ಹೆಸರಿನ ಆ್ಯಪ್‌ಗೆ ಸಂಬಂಧಿಸಿದ ವಂಚನೆಯ ಹೂಡಿಕೆ ಯೋಜನೆಯ ವಿಚಾರವಾಗಿ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ, 30 ಸ್ಥಳಗಳಲ್ಲಿ ಶೋಧ ನಡೆಸಿದೆ. 10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆದಿದೆ. ಬೆಂಗಳೂರಿನಲ್ಲಿಯೂ ಶೋಧ ನಡೆದಿದೆ.

ಈ ಯೋಜನೆಯ ಮೂಲಕ, ಅಸ್ತಿತ್ವದಲ್ಲೇ ಇಲ್ಲದ ಕ್ರಿಪ್ಟೊ ಕರೆನ್ಸಿ ಮೈನಿಂಗ್ ಯಂತ್ರಗಳಲ್ಲಿ ಹೂಡಿಕೆ ಮಾಡುವಂತೆ ಸಾರ್ವಜನಿಕರನ್ನು ವಂಚಿಸಲಾಗಿತ್ತು ಎಂದು ಸಿಬಿಐ ಆರೋಪಿಸಿದೆ. ಶೋಧ ಕಾರ್ಯವು ಮಂಗಳವಾರ ರಾತ್ರಿ ಪೂರ್ಣಗೊಂಡಿದೆ.

ಶಿಗೂ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಮತ್ತು ಲಿಲಿಯನ್ ಟೆಕ್ನೊಕ್ಯಾಬ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಎರಡು ಕಂಪನಿಗಳು ಹಾಗೂ ಅವುಗಳ ನಿರ್ದೇಶಕರ ವಿರುದ್ಧ ಭಾರತೀಯ ದಂಡ ಸಂಹಿತೆ ವಿವಿಧ ಸೆಕ್ಷನ್ನುಗಳ ಅಡಿ ಕ್ರಿಮಿನಲ್ ಪಿತೂರಿ, ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(ಡಿ) ಅಡಿಯಲ್ಲಿಯೂ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ದೆಹಲಿ, ಮುಂಬೈ, ರಾಜಸ್ಥಾನದ ಜೋಧಪುರ, ತಮಿಳುನಾಡು, ಆಂಧ್ರಪ್ರದೇಶ, ಉತ್ತರಪ್ರದೇಶ, ಬಿಹಾರ, ಒಡಿಶಾ ಮತ್ತು ಮಧ್ಯಪ್ರದೇಶದ ಕೆಲವೆಡೆ ಶೋಧ ನಡೆದಿದೆ. ಸಿಬಿಐ ಅಧಿಕಾರಿಗಳು ಲ್ಯಾಪ್‌ಟಾಪ್, ಎಟಿಎಂ ಕಾರ್ಡ್‌ಗಳು, ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.