ADVERTISEMENT

ಅನರ್ಹರಿಂದ ವೈದ್ಯ ವೃತ್ತಿ: ಸಿಬಿಐ ಶೋಧ

ವಿದೇಶದಲ್ಲಿ ವ್ಯಾಸಂಗ ಮಾಡಿ, ಭಾರತದಲ್ಲಿ ಕಡ್ಡಾಯ ಪರೀಕ್ಷೆ ಉತ್ತೀರ್ಣರಾಗದ ಆರೋಪ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 19:42 IST
Last Updated 29 ಡಿಸೆಂಬರ್ 2022, 19:42 IST
   

ನವದೆಹಲಿ: ವಿದೇಶಗಳಲ್ಲಿ ವೈದ್ಯಕೀಯ ಕೋರ್ಸ್ ವ್ಯಾಸಂಗ ಮಾಡಿದವರು ಭಾರತದಲ್ಲಿ ಕಡ್ಡಾಯ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಅವರಿಗೆ ದೇಶದಲ್ಲಿ ವೈದ್ಯಕೀಯ ವೃತ್ತಿ ಮಾಡಲು ಕೆಲವು ರಾಜ್ಯಗಳ ವೈದ್ಯಕೀಯ ಪರಿಷತ್ತುಗಳು ಅನುಮತಿ ನೀಡಿವೆ ಎಂಬ ಆರೋಪದ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ, ಗುರುವಾರ ದೇಶದಾದ್ಯಂತ 91 ಸ್ಥಳಗಳಲ್ಲಿ ಶೋಧ ನಡೆಸಿದೆ.

14 ರಾಜ್ಯಗಳ ವೈದ್ಯಕೀಯ ಪರಿಷತ್ತುಗಳು ಹಾಗೂ 73 ವೈದ್ಯಕೀಯ ಪದವೀಧರರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿದೆ. ಈ ವಿದ್ಯಾರ್ಥಿಗಳು ಭಾರತದಲ್ಲಿ ವೃತ್ತಿಯಲ್ಲಿ ತೊಡಗಬೇಕಿದ್ದರೆ ವಿದೇಶಿ ವೈದ್ಯಕೀಯ ಪದವೀಧರ ಪರೀಕ್ಷೆಯಲ್ಲಿ (ಎಫ್‌ಎಂಜಿಇ) ಕಡ್ಡಾಯವಾಗಿ ಉತ್ತೀರ್ಣರಾಗಬೇಕು. ರಾಷ್ಟ್ರೀಯ ಪರೀಕ್ಷಾ ಮಂಡಳಿಯು (ಎನ್‌ಬಿಇ) ಈ ಪರೀಕ್ಷೆ ನಡೆಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಅಥವಾ ರಾಜ್ಯಗಳ ವೈದ್ಯಕೀಯ ಮಂಡಳಿಗಳಲ್ಲಿ ತಾತ್ಕಾಲಿಕ ಅಥವಾ ಕಾಯಂ ನೋಂದಣಿಗೆ ಅವಕಾಶ ಸಿಗುತ್ತದೆ.

ಪರೀಕ್ಷಾ ಫಲಿತಾಂಶವನ್ನು ವಿದ್ಯಾರ್ಥಿಗಳು ಹಾಗೂ ಸಂಬಂಧಿತ ಮಂಡಳಿಗಳಿಗೆ ಎನ್‌ಬಿಇ ಕಳುಹಿಸಿಕೊಡುತ್ತದೆ. ಒಂದು ವೇಳೆ ವಿದ್ಯಾರ್ಥಿಗಳು ನಕಲಿ ಉತ್ತೀರ್ಣ ಪ್ರಮಾಣ ಪತ್ರಗಳನ್ನು ನೀಡಿದರೆ, ವೈದ್ಯಕೀಯ ಮಂಡಳಿಗಳು ಎನ್‌ಬಿಇ ಕಳುಹಿಸಿದ ಪರೀಕ್ಷಾ ಫಲಿತಾಂಶದ ಜೊತೆ ಪರಿಶೀಲಿಸಬೇಕಿತ್ತು ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಭ್ರಷ್ಟಾಚಾರ, ಅಪರಾಧ ಸಂಚು, ವಂಚನೆ ಆರೋಪದ ಮೇಲೆ ವಿವಿಧ ರಾಜ್ಯಗಳ ವೈದ್ಯಕೀಯ ಮಂಡಳಿಗಳು ಹಾಗೂ ಭಾರತೀಯ ವೈದ್ಯಕೀಯ ಮಂಡಳಿಯ ಅಧಿಕಾರಿಗಳು ಮತ್ತು 73 ವಿದ್ಯಾರ್ಥಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

ಲಂಚ–ರಕ್ಷಣಾ ಲೆಕ್ಕಪತ್ರ ಸೇವೆ ಅಧಿಕಾರಿ ಬಂಧನ: ₹10 ಲಕ್ಷ ಲಂಚ ಪಡೆದ ಆರೋಪದಲ್ಲಿ ಭಾರತೀಯ ರಕ್ಷಣಾ ಲೆಕ್ಕಪತ್ರ ಸೇವೆಯ ಅಧಿಕಾರಿಯೊಬ್ಬರನ್ನು ಸಿಬಿಐ ಗುರುವಾರ ಬಂಧಿಸಿದೆ. ಖಾಸಗಿ ಕಂಪನಿಗಳಿಗೆ ಗುತ್ತಿಗೆ ಕೊಡಿಸಲು ಹಾಗೂ ಬಾಕಿ ಬಿಲ್ ಪಾವತಿಗೆ ಅವರು ನೆರವಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.