ನವದೆಹಲಿ/ಕೋಲ್ಕತ್ತ: ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಅಲ್ಲಿನ ಮಾಜಿ ವೈದ್ಯಕೀಯ ನಿರೀಕ್ಷಕ ಹಾಗೂ ಉಪ ಪ್ರಾಂಶುಪಾಲ (ಎಂಎಸ್‌ವಿಪಿ) ಸಂಜಯ್ ವಸಿಷ್ಠ ಹಾಗೂ ಇತರ 13 ಜನರಿಗೆ ಸೇರಿದ ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಭಾನುವಾರ ಶೋಧ ನಡೆಸಿದ್ದಾರೆ.
ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಹಣದ ಅವ್ಯವಹಾರಗಳ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ಕೋಲ್ಕತ್ತದಲ್ಲಿ ಹಾಗೂ ನಗರದ ಸುತ್ತಮುತ್ತಲಿನ ಕೆಲವು ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆಗೆ ಅಗತ್ಯವಿರುವ ವಸ್ತುಗಳನ್ನು ಪೂರೈಕೆ ಮಾಡುವವರ ಮನೆ ಹಾಗೂ ಕಚೇರಿಯಲ್ಲಿಯೂ ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಘೋಷ್ ಅವರನ್ನು ಸಿಬಿಐನ ಏಳು ಮಂದಿ ಅಧಿಕಾರಿಗಳು ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ಅವರ ನಿವಾಸದಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. ಕೆಲವು ಅಧಿಕಾರಿಗಳು ವಸಿಷ್ಠ ಅವರ ವಿಚಾರಣೆ ನಡೆಸುತ್ತಿದ್ದಾರೆ. ಸಿಬಿಐ ಅಧಿಕಾರಿಗಳು ಭದ್ರತೆಗೆ ಕೇಂದ್ರೀಯ ಪಡೆಗಳನ್ನು ಕರೆದುಕೊಂಡು ಬಂದಿದ್ದರು.
ಸಿಬಿಐ ತಂಡವು ಬೆಳಿಗ್ಗೆ 6 ಗಂಟೆಗೇ ಘೋಷ್ ಅವರ ಮನೆ ಮುಂದೆ ಇತ್ತು. ಆದರೆ ಬಾಗಿಲು ತೆರೆಯಲು ಘೋಷ್ ಅವರು ಒಂದೂವರೆ ಗಂಟೆ ಸಮಯ ತೆಗೆದುಕೊಂಡರು. ಸಿಬಿಐ ತಂಡವು ಅಷ್ಟು ಹೊತ್ತು ಮನೆಯ ಎದುರು ಕಾಯಬೇಕಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ವಸಿಷ್ಠ ಅವರು ಆಸ್ಪತ್ರೆಯ ಎಂಎಸ್‌ವಿಪಿ ಆಗಿದ್ದಾಗ ಅಲ್ಲಿ ನಡೆದ ಹಣಕಾಸಿನ ಅಕ್ರಮಗಳ ಬಗ್ಗೆ ಎಷ್ಟರಮಟ್ಟಿಗೆ ಮಾಹಿತಿ ಹೊಂದಿದ್ದರು ಎಂಬ ಬಗ್ಗೆ ಅವರಲ್ಲಿ ಪ್ರಶ್ನಿಸಲಾಗಿದೆ’ ಎಂದು ಮೂಲಗಳು ಹೇಳಿವೆ.
ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಈಗಿನ ಪ್ರಾಂಶುಪಾಲ ಮನಸ್ ಕುಮಾರ್ ಬಂದ್ಯೋಪಾಧ್ಯಾಯ ಅವರಿಗೆ ಆಸ್ಪತ್ರೆಗೆ ಬರುವಂತೆ ಸೂಚಿಸಿದ್ದ ಅಧಿಕಾರಿಗಳು, ಅಲ್ಲಿ ನಡೆಸಿದ ಶೋಧ ಕಾರ್ಯದ ಸಂದರ್ಭದಲ್ಲಿ ಅವರನ್ನೂ ತಮ್ಮ ಜೊತೆ ಇರಿಸಿಕೊಂಡಿದ್ದರು.
ವೈದ್ಯ ವಿದ್ಯಾರ್ಥಿನಿಯೊಬ್ಬಳ ಮೇಲೆ ಈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ಅತ್ಯಾಚಾರ ನಡೆಸಿ ಆಕೆಯನ್ನು ಹತ್ಯೆ ಮಾಡಲಾಗಿದೆ. ಅತ್ಯಾಚಾರ, ಹತ್ಯೆ ಹಾಗೂ ಸಂಸ್ಥೆಯಲ್ಲಿ ನಡೆದಿರುವ ಹಣಕಾಸಿನ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವಂತೆ ಕಲ್ಕತ್ತ ಹೈಕೋರ್ಟ್ ಸಿಬಿಐಗೆ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.