ADVERTISEMENT

ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ: ಸಂದೀಪ್ ಘೋಷ್‌ಗೆ ಮತ್ತೆ ಸುಳ್ಳು ಪತ್ತೆ ಪರೀಕ್ಷೆ

ಪಿಟಿಐ
Published 26 ಆಗಸ್ಟ್ 2024, 11:17 IST
Last Updated 26 ಆಗಸ್ಟ್ 2024, 11:17 IST
<div class="paragraphs"><p>ಸಂದೀಪ್‌ ಘೋಷ್‌</p></div>

ಸಂದೀಪ್‌ ಘೋಷ್‌

   

(ಪಿಟಿಐ ಚಿತ್ರ)

ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆಯ ಭಾಗವಾಗಿ ಸಿಬಿಐ ಆರ್‌.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಇತರ ಐವರಿಗೆ ಎರಡನೇ ಸುತ್ತಿನ ಸುಳ್ಳು ಪತ್ತೆ ಪರೀಕ್ಷೆಯನ್ನು ಆರಂಭಿಸಿದೆ.

ADVERTISEMENT

ಘೋಷ್ ಅವರು ಕಳೆದ ಹತ್ತು ದಿನಗಳಿಂದ ಹೇಳಿಕೆ ಬದಲಾಯಿಸುತ್ತಿದ್ದಾರೆ. ಹೀಗಾಗಿ ಅವರನ್ನು ಎರಡನೆಯ ಬಾರಿಗೆ ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘೋಷ್ ಹಾಗೂ ಇತರ ಐವರನ್ನು ಶನಿವಾರ ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಂಧಿತ ಆರೋಪಿ ಸಂಜಯ್‌ ರಾಯ್‌ನನ್ನು ಭಾನುವಾರ ಸುಳ್ಳುಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಈ ಪರೀಕ್ಷೆಯ ಮೂಲಕ ಸಿಗುವ ಮಾಹಿತಿಯನ್ನು ಸಾಕ್ಷ್ಯವಾಗಿ ಪರಿಗಣಿಸಲು ಕಾನೂನಿನ ಅಡಿ ಅವಕಾಶ ಇಲ್ಲ. ಆದರೆ, ಪರೀಕ್ಷೆಯ ಸಂದರ್ಭದಲ್ಲಿ ಆರೋಪಿಗಳು ನೀಡುವ ಮಾಹಿತಿಯು ತನಿಖಾಧಿಕಾರಿಗಳಿಗೆ ಮುಂದಡಿ ಇರಿಸುವುದಕ್ಕೆ ನೆರವಾಗುತ್ತದೆ.

ಅವ್ಯವಹಾರ, ಎಫ್‌ಐಆರ್ ದಾಖಲು:

ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಘೋಷ್ ಅವರು ಪ್ರಾಂಶುಪಾಲರಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರ ಕುರಿತು ಸಿಬಿಐ ಅಧಿಕಾರಿಗಳು ದಾಖಲಿಸಿರುವ ಎಫ್ಐಆರ್‌ನಲ್ಲಿ ಘೋಷ್ ಅವರ ಹೆಸರು ಉಲ್ಲೇಖವಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ (ಕ್ರಿಮಿನಲ್ ಪಿತೂರಿ), ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕತೆ) ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ–1988ರ ಸೆಕ್ಷನ್ 7ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ವಿಶೇಷ ಕಾರ್ಯದರ್ಶಿ ದೇಬಲ್ ಕುಮಾರ್ ಘೋಷ್ ಅವರು ಸಲ್ಲಿಸಿರುವ ದೂರು ಆಧರಿಸಿ ಶನಿವಾರವೇ ಈ ಎಫ್‌ಐಆರ್ ದಾಖಲಿಸಲಾಗಿದೆ. ಕಲ್ಕತ್ತ ಹೈಕೋರ್ಟ್‌ನ ನಿರ್ದೇಶನ ಆಧರಿಸಿ ಸಿಬಿಐ ಈ ತನಿಖೆಯನ್ನು ಕೈಗೆತ್ತಿಕೊಂಡಿದೆ.

ಸಂದೀಪ್ ಘೋಷ್ ಅವರು 2021ರ ಫೆಬ್ರುವರಿಯಿಂದ 2023ರ ಸೆಪ್ಟೆಂಬರ್‌ವರೆಗೆ ಈ ಸಂಸ್ಥೆಯ ಪ್ರಾಂಶುಪಾಲರಾಗಿದ್ದರು. ಅಕ್ಟೋಬರ್‌ನಲ್ಲಿ ಅವರ ವರ್ಗ ಆಗಿತ್ತು. ಆದರೆ, ಒಂದೇ ತಿಂಗಳಲ್ಲಿ ಅವರು ಮತ್ತೆ ಅದೇ ಹುದ್ದೆಗೆ ಮರಳಿದ್ದರು. ವೈದ್ಯ ವಿದ್ಯಾರ್ಥಿನಿಯ ಹತ್ಯೆ ನಡೆಯುವ ದಿನದವರೆಗೂ ಅವರು ಅದೇ ಹುದ್ದೆಯಲ್ಲಿದ್ದರು.

13 ಜನರಿಗೆ ಸೇರಿದ ಸ್ಥಳಗಳಲ್ಲಿ ಸಿಬಿಐ ಶೋಧ:

ಆರ್. ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಅಲ್ಲಿನ ಮಾಜಿ ವೈದ್ಯಕೀಯ ನಿರೀಕ್ಷಕ ಹಾಗೂ ಉಪ ಪ್ರಾಂಶುಪಾಲ (ಎಂಎಸ್‌ವಿಪಿ) ಸಂಜಯ್ ವಸಿಷ್ಠ ಹಾಗೂ ಇತರ 13 ಜನರಿಗೆ ಸೇರಿದ ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ಭಾನುವಾರ ಶೋಧ ನಡೆಸಿದ್ದಾರೆ.

ಘೋಷ್‌ ಅವರ ನಿವಾಸದಲ್ಲಿ 13 ತಾಸು ಶೋಧ ನಡೆಸಿದ ಅಧಿಕಾರಿಗಳು ಕೆಲವೊಂದು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಹಣದ ಅವ್ಯವಹಾರಗಳ ಕುರಿತ ತನಿಖೆ ಭಾಗವಾಗಿ ಕೋಲ್ಕತ್ತದಲ್ಲಿ ಹಾಗೂ ನಗರದ ಸುತ್ತಮುತ್ತಲಿನ ಕೆಲವು ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.