ADVERTISEMENT

ನೌಕಾಪಡೆ ರಹಸ್ಯ ಸೋರಿಕೆ: ನಿವೃತ್ತ ಕ್ಯಾಪ್ಟನ್‌ಗೆ 7 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 11 ಜುಲೈ 2018, 12:07 IST
Last Updated 11 ಜುಲೈ 2018, 12:07 IST
   

ನವದೆಹಲಿ (ಪಿಟಿಐ): ನೌಕಾಪಡೆಯ ರಹಸ್ಯ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಕ್ಯಾಪ್ಟನ್‌ ಸಲಾಂ ಸಿಂಗ್‌ ರಾಥೋಡ್‌ಗೆ ದೆಹಲಿ ನ್ಯಾಯಾಲಯ ಬುಧವಾರ ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ.

2006ರಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಮಾಹಿತಿ ಸೋರಿಕೆ ಮಾಡಿದ ಅಪರಾಧಕ್ಕೆ ಸಲಾಂ ಸಿಂಗ್‌ ಈ ಶಿಕ್ಷೆಗೆ ಗುರಿಯಾಗಿದ್ದಾರೆ.

ಸಿಬಿಐ ವಿಶೇಷ ನ್ಯಾಯಾಧೀಶ ಎಸ್.ಕೆ. ಅಗರ್‌ವಾಲ್‌ ಈ ಆದೇಶ ನೀಡಿದ್ದು, ‘ರಕ್ಷಣಾ ಇಲಾಖೆಗೆ ಸಂಬಂಧಿಸಿದ ದಾಖಲೆಗಳನ್ನು ಸಲಾಂಸಿಂಗ್‌ ಅಕ್ರಮವಾಗಿ ತಮ್ಮ ಬಳಿ ಇಟ್ಟುಕೊಂಡಿದ್ದರು. ಈ ದಾಖಲೆಗಳು ‍ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಶತ್ರು ರಾಷ್ಟ್ರಗಳಿಗೆ ಅನುಕೂಲ ಒದಗಿಸುವಂಥವುಗಳಾಗಿವೆ’ ಎಂದು ಹೇಳಿದ್ದಾರೆ.

ADVERTISEMENT

ಅಧಿಕಾರಿಯಾಗಿರುವ ಕಾರಣ ಕಾನೂನುಬದ್ಧತೆಯಡಿ ಶಿಕ್ಷೆಯಿಂದ ಸಲಾಂಸಿಂಗ್‌ ವಿನಾಯ್ತಿ ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಯಾಲಯ, ‘ಕಾನೂನುಬದ್ಧತೆಯಡಿ ಯಾವುದೇ ವಿನಾಯ್ತಿ ನೀಡಲು ಸಾಧ್ಯವಿಲ್ಲ. ನೀವು ಮಾಡಿರುವ ಕೃತ್ಯ ಸಮಾಜಕ್ಕೆ ಎಸಗಿದ ದ್ರೋಹ ಮಾತ್ರವಲ್ಲ. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಎಸಗಿದ ಅಪರಾಧ’ ಎಂದು ಹೇಳಿದೆ.

‘ರಕ್ಷಣಾ ಅಧಿಕಾರಿಯಾಗಿ ದೇಶದ ಏಕತೆ, ಭದ್ರತೆಗೆ ಜೀವ ಮುಡಿಪಾಗಿಡುವುದು ಮೂಲ ಕರ್ತವ್ಯ. ಆದರೆ, ನೀವು ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದೀರಿ’ ಎಂದು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತ್ಯೇಕ ದೋಷಾರೋಪ ಪಟ್ಟಿ ಸಲ್ಲಿಸಿದ್ದ ಸಿಬಿಐ, ‘ಸಲಾಂಸಿಂಗ್‌ ಅವರಿಂದ 7 ಸಾವಿರ ಪುಟಗಳ 17 ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ 9 ದಾಖಲೆಗಳು ರಹಸ್ಯವಾದವುಗಳಾಗಿದ್ದರೆ, ನಾಲ್ಕು ನಿರ್ಬಂಧಿತ ಮತ್ತು ಒಂದು ಗೋಪ್ಯ ದಾಖಲೆಯಾಗಿದೆ’ ಎಂದು ಹೇಳಿದ್ದಲ್ಲದೆ, ಸಿಂಗ್‌ಗೆ 14 ವರ್ಷ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿತ್ತು.

ನೌಕಾಪಡೆ ಮಾಜಿ ಲೆಫ್ಟಿನೆಂಟ್‌ ಕುಲಭೂಷಣ ಪರಾಶರ, ಮಾಜಿ ಕಮಾಂಡರ್‌ ವಿಜೇಂದರ್‌ ರಾಣಾ, ನೌಕಾಪಡೆ ಉಚ್ಛಾಟಿತ ಕಮಾಂಡರ್‌ ವಿ.ಕೆ. ಝಾ, ಮಾಜಿ ವಿಂಗ್‌ ಕಮಾಂಡರ್‌ ಸಂಭಾ ಜೀ ಲಾ ಸುರ್ವೆ ಮತ್ತು ದೆಹಲಿಯ ಉದ್ಯಮಿ, ಶಸ್ತ್ರಾಸ್ತ್ರ ವ್ಯಾಪಾರಿ ಅಭಿಷೇಕ ವರ್ಮಾ ಕೂಡ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಸದ್ಯ ಜಾಮೀನಿನ ಮೇಲಿದ್ದಾರೆ.

ಪ್ರಕರಣದ ಮತ್ತೊಬ್ಬ ಆರೋಪಿಯಾಗಿದ್ದ ನಿವೃತ್ತ ಕಮಾಂಡರ್‌ ಜರ್ನೈಲ್‌ ಸಿಂಗ್‌ ಕಲ್ರಾ ಅವರನ್ನು ಖುಲಾಸೆಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.