ADVERTISEMENT

ರಫೇಲ್ ದಾಖಲೆ ಕೇಳಿದ್ದು ಅಲೋಕ್ ವರ್ಮಾ ಮಾಡಿದ ತಪ್ಪೇ?

ಸಿಬಿಐ ಪ್ರಹಸನದ ಒಳಸುಳಿಗಳು ಹೇಳುವುದೇನು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2018, 9:07 IST
Last Updated 24 ಅಕ್ಟೋಬರ್ 2018, 9:07 IST
   

ನವದೆಹಲಿ: ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ನಿರ್ದೇಶಕ ಅಲೋಕ್ ವರ್ಮಾ ಅವರನ್ನು ರಜೆ ಮೇಲೆತೆರಳುವಂತೆ ಸೂಚಿಸಿರುವ ಕೇಂದ್ರ ಸರ್ಕಾರ ರಾತ್ರೋರಾತ್ರಿ ಎಂ.ನಾಗೇಶ್ವರ ರಾವ್ ಅವರನ್ನು ಸಿಬಿಐನ ಹಂಗಾಮಿ ನಿರ್ದೇಶಕಕಾಗಿ ನೇಮಕ ಮಾಡಿದೆ.ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ನಡುವೆ ನಡೆಯುತ್ತಿದ್ದಕಿತ್ತಾಟ ತಾರಕಕ್ಕೇರಿದ್ದರಿಂದ ಮಂಗಳವಾರ ರಾತ್ರಿ 2 ಗಂಟೆಗೆ ಕೇಂದ್ರ ಸರ್ಕಾರ ತುರ್ತು ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿತ್ತು.

ಅಲೋಕ್ ವರ್ಮಾ ಸ್ಥಾನ ವಂಚಿತರಾಗಲು ಕೇವಲ ಇದೊಂದೇ ಕಾರಣವಲ್ಲ ಎನ್ನುವ ವಿಶ್ಲೇಷಣೆಗಳು ಇದೀಗ ಪ್ರವರ್ಧಮಾನಕ್ಕೆ ಬರುತ್ತಿವೆ. ‘ರಫೇಲ್ ಒಪ್ಪಂದದ ದಾಖಲೆ ಪತ್ರಗಳನ್ನು ಕೇಳಿದ್ದು ಮತ್ತು ಪ್ರಧಾನಿಯ ಆಪ್ತ ಅಧಿಕಾರಿಗಳ ಬಂಧನಕ್ಕೆ ಅನುಮತಿ ಕೋರಿದ್ದು ವರ್ಮಾ ಪದಚ್ಯುತಿಗೆ ಕಾರಣ’ಎಂದು ‘ದಿ ವೈರ್’ ಜಾಲತಾಣ ವರದಿ ಮಾಡಿದೆ.

ಸಿಬಿಐ ವಿಶೇಷ ನಿರ್ದೇಶಕರಾಕೇಶ್ ಅಸ್ತಾನಾ ವಿರುದ್ಧ ಸೆ.15ರಂದು ಸಿಬಿಐಲಂಚ ಪಡೆದ ಆರೋಪ ಹೊರಿಸಿ, ಎಫ್‌ಐಆರ್ ದಾಖಲಿಸಿತ್ತು.ಮೋದಿ ಅವರ ಅಪ್ತ ಎನ್ನಲಾದ ಅಸ್ತಾನಾ ಗುಜರಾತ್ಕೇಡರ್‌ನ ಐಪಿಎಸ್ ಅಧಿಕಾರಿ.ಮಾಂಸ ರಫ್ತು ಉದ್ಯಮಿ ಮೊಯಿನ್‌ ಖುರೇಷಿ ವಿರುದ್ಧದ ಅಕ್ರಮ ವ್ಯವಹಾರಪ್ರಕರಣವನ್ನು ದುರ್ಬಲಗೊಳಿಸಲು ಅಸ್ತಾನಾ ಅವರು ₹2 ಕೋಟಿ ಲಂಚ ಪಡೆದಿದ್ದಾರೆ ಎಂದು ಉದ್ಯಮಿ ಸತೀಶ್‌ ಸನಾ ಆರೋಪಿಸಿದ್ದರು.ಜಂಟಿ ನಿರ್ದೇಶಕರ ದರ್ಜೆಯಿಂದ ಮೇಲಿನ ದರ್ಜೆ ಹೊಂದಿರುವ ಯಾವುದೇ ಅಧಿಕಾರಿಯನ್ನು ಬಂಧಿಸಲು ಸರ್ಕಾರದ ಆದೇಶದ ಅಗತ್ಯವಿದೆ.ಹಾಗಾಗಿ ಅಸ್ತಾನಾಅವರ ಬಂಧನಕ್ಕೆ ಅನುಮತಿ ನೀಡುವಂತೆ ವರ್ಮಾ ಮನವಿ ಮಾಡಿದ್ದರು.ಆದರೆ ಇದಕ್ಕೆ ಸರ್ಕಾರ ಅನುಮತಿ ನಿರಾಕರಿಸಿತ್ತು.

ADVERTISEMENT

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೇರಿದಂತೆಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವವರ ಕೊಲಿಜಿಯಂ ವರ್ಮಾ ಅವರನ್ನು ಸಿಬಿಐ ನಿರ್ದೇಶಕರಾಗಿ ಆಯ್ಕೆ ಮಾಡಿತ್ತು. ಎರಡು ಅವರ ಸೇವಾವಧಿಜನವರಿ 2019ಕ್ಕೆ ಅಂತ್ಯಗೊಳ್ಳಲಿದೆ.ವರ್ಮಾ ಅವರು36 ರಫೇಲ್ ವಿಮಾನಗಳನ್ನು ಖರೀದಿಸುವ ವಿವಾದಿತ ನಿರ್ಧಾರದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲು ಮುಂದಾಗಿದ್ದರು. ಇದು ಪ್ರಧಾನಿಯ ಆಪ್ತರ ಕೆಂಗಣ್ಣಿಗೆ ಕಾರಣವಾಗಿತ್ತು ಎನ್ನಲಾಗಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ₹90 ಸಾವಿರ ಕೋಟಿ ವೆಚ್ಚದಲ್ಲಿ 126 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವಪ್ರಸ್ತಾವ ಇತ್ತು. 2014ರಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರ ಈ ಒಪ್ಪಂದವನ್ನು ಬದಿಗಿರಿಸಿ ₹60 ಸಾವಿರ ಕೋಟಿ ವೆಚ್ಚದಲ್ಲಿ36 ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿತು. ಈ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿ ಮಾಜಿ ಸಚಿವರಾದ ಯಶವಂತ್ ಸಿನ್ಹಾ, ಅರುಣ್ ಶೌರಿಮತ್ತು ವಕೀಲ ಪ್ರಶಾಂತ್ ಭೂಷಣ್ ಅವರು ಸಿಬಿಐಗೆ ದೂರು ನೀಡಿದ್ದರು.ಈ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿಯೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಾಗಿತ್ತು.

ಏತನ್ಮಧ್ಯೆ, ಈ ಒಪ್ಪಂದದ ಪ್ರಕ್ರಿಯೆಗಳ ಬಗ್ಗೆ ವಿವರಣೆ ನೀಡುವಂತೆ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು.ಅದೇ ವೇಳೆ ವರ್ಮಾ ಅವರು ರಫೇಲ್ ಒಪ್ಪಂದದ ದಾಖಲೆ ಪತ್ರಗಳನ್ನು ನೀಡುವಂತೆ ರಕ್ಷಣಾ ಸಚಿವಾಲಯಕ್ಕೆ ಮನವಿ ಮಾಡಿದ್ದರು ಎಂದು ಅಧಿಕೃತ ಮೂಲಗಳು ‘ದಿ ವೈರ್‌’ಗೆ ಹೇಳಿವೆ. ವರ್ಮಾ ಅವರು ಈ ದಾಖಲೆ ಪತ್ರಗಳಿಗೆ ಬೇಡಿಕೆಯೊಡ್ಡಿರುವುದು ಪ್ರಧಾನಿ ಮೋದಿ ಮತ್ತು ಅವರ ಆಪ್ತ, ದೇಶದ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಅವರಿಗೆ 'ಅಪಾಯಕಾರಿ ನಡೆ' ಎಂದೆನಿಸಿತ್ತು. ಈ ಕಾರಣದಿಂದಲೇ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ಕಿತ್ತೊಗೆಯುವ ತೀರ್ಮಾನಕ್ಕೆಸರ್ಕಾರ ಮುಂದಾಗಿತ್ತು.

ಇದರ ಪರಿಣಾಮ ಎಂಬಂತೆಸಿಬಿಐನ ಎಲ್ಲ ತಂಡಗಳನ್ನು ವಿಲೀನಗೊಳಿಸಿ, ಅನಾಮಿಕ ತನಿಖಾ ಅಧಿಕಾರಿಗಳಿಂದ ಸಿಬಿಐ ಕಚೇರಿಗೆ ದಾಳಿ ನಡೆಸಿ ಬೀಗಮುದ್ರೆ ಹಾಕಲಾಯಿತು.

ಸಿಬಿಐ ಹಂಗಾಮಿ ನಿರ್ದೇಶಕರಾಗಿ ಎಂ. ನಾಗೇಶ್ವರ ರಾವ್ ಅವರನ್ನು ಸರ್ಕಾರ ನೇಮಕ ಮಾಡಿದೆ.ಸಿಬಿಐ ನಿರ್ದೇಶಕ ಸ್ಥಾನಕ್ಕೇರಿದ ಮೊದಲ ಐಜಿಯಾಗಿದ್ದಾರೆ ರಾವ್.ರಾವ್ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕೆಂದು ವರ್ಮಾ ಬಯಸಿದ್ದರು. ಆದರ ಮೋದಿ ನೇಮಕ ಮಾಡಿದ್ದ ಕೇಂದ್ರ ಜಾಗೃತ ಆಯೋಗ (ಸಿವಿಸಿ) ಆಯುಕ್ತ ಕೆ.ವಿ. ಚೌಧರಿ ಅದಕ್ಕೆ ತಡೆಯೊಡ್ಡಿದ್ದರು.

ಸಿವಿಸಿ ಆದೇಶದ ಮೇರೆಗೆವರ್ಮಾ ಅವರನ್ನು ನಿರ್ದೇಶಕ ಸ್ಥಾನದಿಂದ ತೆರವುಗೊಳಿಸಲಾಯಿತು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.ಸರ್ಕಾರದ ಈ ನಡೆಯನ್ನು ಪ್ರಶ್ನಿಸಿತಾನು ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ನ್ಯಾಯವಾದಿ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಘೋಷಿಸಿದ್ದಾರೆ.

‘ಸಿಬಿಐನ ಘನತೆ ಮರುಸ್ಥಾಪಿಸುವುದು ನಮ್ಮ ಉದ್ದೇಶ.ವರ್ಮಾ ಮತ್ತು ಅಸ್ತಾನಾ ಇಬ್ಬರ ವಿರುದ್ಧವೂ ಕ್ರಮ ತೆಗೆದುಕೊಂಡಿದ್ದೇವೆ’ ಎಂದುಮೋದಿ ಸರ್ಕಾರ ಹೇಳುತ್ತಿದೆ.ಇವರಿಬ್ಬರೂ ಸಿಬಿಐ ಅಧಿಕಾರಿಗಳಾಗಿದ್ದರೂ ಇವರಿಬ್ಬರು ಎದುರಿಸುತ್ತಿರುವಪ್ರಕರಣಗಳ ಸ್ವರೂಪ ಪ್ರತ್ಯೇಕವಾಗಿವೆ. ಕೊಲಿಜಿಯಂನಿಂದ ನೇಮಕಗೊಂಡಿದ್ದ ಸಿಬಿಐ ನಿರ್ದೇಶಕ ವರ್ಮಾ ಅವರು ತಮ್ಮ ಕಿರಿಯ ಸಹೋದ್ಯೋಗಿ ಮೇಲೆ ಲಂಚದ ಆರೋಪ ಕೇಳಿ ಬಂದಾಗ ಕಾನೂನು ರೀತಿಯಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದರು. ಮಾಧ್ಯಮಗಳು ಹೇಳುವಂತೆ ಈ ಇಬ್ಬರು ಅಧಿಕಾರಿಗಳ ನಡುವಿನ ಹಗ್ಗಜಗ್ಗಾಟ ಇದಲ್ಲ. ಇದು ಸಿಬಿಐನ ಕಾರ್ಯನಿರ್ವಹಣೆಯನ್ನುರಾಜಕೀಯಗೊಳಿಸುವ ಸರ್ಕಾರದ ಹುನ್ನಾರ. ನಿರ್ದೇಶಕರಾಗಿದ್ದ ವರ್ಮಾ, ರಾಜಕೀಯ ವೈರಿಗಳ ವಿರುದ್ಧ ಸೇಡು ತೀರಿಸಲು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರಲಿಲ್ಲ.ಆದರೆ ವಿಶೇಷ ನಿರ್ದೇಶಕರಾಗಿದ್ದ ಅಸ್ತಾನಾ, ರಾಜಕೀಯ ಆಟಗಳನ್ನು ಆಡುತ್ತಿದ್ದರು.ಈ ಆಟಗಳಿಗೆ ವರ್ಮಾ ಆಸ್ಪದ ನೀಡದೇ ಇದ್ದಾಗ ಅಸ್ತಾನಾ, ವರ್ಮಾ ವಿರುದ್ಧ ಸಿವಿಸಿಗೆದೂರು ನೀಡಿದ್ದರು.

ವಿಜಯ್ ಮಲ್ಯ ಅವರ ವಿರುದ್ಧದ ಪ್ರಕರಣವನ್ನೂ ಅಸ್ತಾನಾ ದಿಕ್ಕು ತಪ್ಪಿಸಿದ್ದರು ಎಂದು ಸಿಬಿಐಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.
ಮೂಲಗಳ ಪ್ರಕಾರ ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ದೋವಲ್ ಮಂಗಳವಾರ ಸಂಜೆ ಸಭೆ ಸೇರಿದ್ದರು.ಇದಾದ ನಂತರ ಸಿಬಿಐ ವಿರುದ್ಧ ದಿಢೀರ್ ಕಾರ್ಯಾಚರಣೆ ನಡೆದಿದೆ. ಇದು ಅಘೋಷಿತ ತುರ್ತು ಪರಿಸ್ಥಿತಿಗಿರುವ ತಾಜಾ ಉದಾಹರಣೆ ಇದು ಎಂದು ಹಿರಿಯ ಅಧಿಕಾರಿಗಳ ಅಂಬೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.