ನವದೆಹಲಿ: ತಮನ್ನು ದೀರ್ಘ ರಜೆಯ ಮೇಲೆ ಕಳುಹಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಸಿಬಿಐ ನಿರ್ದೇಶಕ ಅಲೋಕ್ ಕುಮಾರ್ ಅವರ ಅರ್ಜಿಯ ವಿಚಾರಣೆ ಮತ್ತೆ ಮುಂದಕ್ಕೆ ಹೋಗಿದೆ.
‘ಅತ್ಯುನ್ನತ ಸಮಿತಿಯ ಮೂಲಕ ಸಿಬಿಐ ನಿರ್ದೇಶಕರ ನೇಮಕವಾಗಿರುತ್ತದೆ.ಕೇಂದ್ರ ಸರ್ಕಾರ ಮತ್ತು ಕೇಂದ್ರ ಜಾಗೃತ ಆಯೋಗವುಆ ಸಮಿತಿಯ ಗಮನಕ್ಕೆ ತರದೆಯೇ ಸಿಬಿಐ ನಿರ್ದೇಶಕರ ಅಧಿಕಾರವನ್ನು ವಾಪಸ್ ಪಡೆದುಕೊಳ್ಳಬಹುದೇ’ ಎಂಬುದನ್ನು ಪರಿಶೀಲಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ನಿಗದಿಪಡಿಸಿದೆ.
ಇದಕ್ಕೂ ಮುನ್ನ ಈ ಬಗ್ಗೆ ಅಲೋಕ್ ಕುಮಾರ್ ಅವರ ವಕೀಲ ಎಫ್.ಎಸ್.ನಾರಿಮನ್ ಮತ್ತು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರನ್ನು ಪೀಠವು ಪ್ರಶ್ನಿಸಿತು.‘ಯಾವುದೇ ಸಂದರ್ಭದಲ್ಲಿಯೂ ಸರ್ಕಾರವು ನೇರವಾಗಿ ಕ್ರಮ ತೆಗೆದುಕೊಳ್ಳುವಂತಿಲ್ಲ. ಅದು ಅತ್ಯುನ್ನತ ಸಮಿತಿಯ ಮೊರೆ ಹೋಗಬೇಕು’ ಎಂದು ನಾರಿಮನ್ ಹೇಳಿದರು.
‘ಅತ್ಯುನ್ನತ ಸಮಿತಿಯು ಶಿಫಾರಸು ಮಾಡಿದ್ದರೂ, ನೇಮಕಾತಿಗೆ ಸಂಬಂಧಿಸಿದ ಸಂಸದೀಯ ಸಮಿತಿ ನೇಮಕಾತಿ ಮಾಡಿರುತ್ತದೆ. ಹೀಗಾಗಿ ಸರ್ಕಾರವಾಗಲೀ, ಆಯೋಗವಾಗಲೀ ಸ್ವತಂತ್ರ್ಯವಾಗಿ ಕ್ರಮ ತೆಗೆದುಕೊಳ್ಳಬಹುದು’ ಎಂದು ವೇಣುಗೋಪಾಲ್ ತಿಳಿಸಿದರು.
ಸುದ್ದಿ ಪ್ರಸಾರವನ್ನು ತಡೆಯಲಾಗದು:‘ವಾಹಿನಿಗಳು ಸುದ್ದಿಯನ್ನು ಪ್ರಸಾರ ಮಾಡುವುದನ್ನು ಮುಂದೂಡಬಹುದೇ ಹೊರತು, ಪ್ರಸಾರವನ್ನು ತಡೆಯಲಾಗದು. ಸಹರಾ ಪ್ರಕರಣಕ್ಕೆ ಸಂಬಂಧಿಸಿದಂತೆ 2012ರಲ್ಲಿ ಸಂವಿಧಾನ ಪೀಠವು ಹೀಗೆ ಹೇಳಿತ್ತು’ ಎಂದು ನಾರಿಮನ್ ಅವರು ಪೀಠಕ್ಕೆ ತಿಳಿಸಿದರು.
ಜಾಗೃತ ಆಯೋಗದ ವರದಿಗೆ ಅಲೋಕ್ ಕುಮಾರ್ ಅವರು ನೀಡಿದ್ದ ಪ್ರತಿಕ್ರಿಯೆ ಸುದ್ದಿ ವಾಹಿನಿಗಳಿಗೆ ಸೋರಿಕೆ ಆದುದ್ದರ ಬಗ್ಗೆ ಪೀಠವು ವಿವರಣೆ ಕೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.