ಮುಂಬೈ: ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ) ಹಾಗೂ ಅಮೆರಿಕದ ಫೆಡರಲ್ ಬ್ಯುರೋ ಇನ್ವೆಸ್ಟಿಗೇಷನ್ (ಎಫ್‌ಬಿಐ) ಮುಂಬೈ ಹಾಗೂ ಪುಣೆಯಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸೈಬರ್ ಅಪರಾಧಗಳ ಜಾಲವನ್ನು ಬೇಧಿಸಿದ್ದು, ಒಬ್ಬರನ್ನು ಬಂಧಿಸಿದೆ.
‘2022ರಿಂದ ಅಮೆರಿಕದ ಪ್ರಜೆಗಳಿಗೆ ತಾಂತ್ರಿಕ ನೆರವಾಗುವುದಾಗಿ ನಂಬಿಸುತ್ತಿದ್ದ ಆರೋಪಿಯು, ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿ, ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದರು. ನಂತರ ಈ ಹಣವನ್ನು ಕ್ರಿಪ್ಟೊಕರೆನ್ಸಿಗೆ ಬದಲಾಯಿಸಿಕೊಳ್ಳುತ್ತಿದ್ದರು’ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಂಚನೆಯನ್ನು ಪತ್ತೆಹಚ್ಚಲು ಸಿಬಿಐ ಹಾಗೂ ಎಫ್‌ಬಿಐ ಅಧಿಕಾರಿಗಳು ಜಂಟಿಯಾಗಿ ‘ಚಕ್ರ–3’ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದರು. ಕಳೆದೆರಡು ದಿನಗಳ ಕಾಲ ಮುಂಬೈ ಹಾಗೂ ಪುಣೆಯ ಏಳು ಕಡೆಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು.
ಇದಾದ ಬಳಿಕ, ಸಿಬಿಐನ ಅಂತರರಾಷ್ಟ್ರೀಯ ಕಾರ್ಯಾಚರಣಾ ವಿಭಾಗವು ಮುಂಬೈ ಮೂಲದ ವಿಷ್ಣು ರಥಿ (57) ವ್ಯಕ್ತಿ ವಿರುದ್ಧ ದೂರು ದಾಖಲಿಸಿ, ಬಂಧಿಸಿದೆ.
ಬಂಧಿತರ ನಿವಾಸದಿಂದ 100 ಗ್ರಾಂ ತೂಕದ ಎರಡು ಚಿನ್ನದ ಗಟ್ಟಿ, ₹16 ಲಕ್ಷ ನಗದು, ಮೊಬೈಲ್ ಫೋನ್, ಕ್ರಿಪ್ಟೊಕರೆನ್ಸಿ ವ್ಯವಹಾರಕ್ಕೆ ಬಳಸಿಕೊಳ್ಳುತ್ತಿದ್ದ ಲ್ಯಾಪ್‌ಟಾಪ್, ಲಾಕರ್ ಹಾಗೂ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.