ನವದೆಹಲಿ: ’ದೆಹಲಿಯ ಪುಲ್ ಭಂಗಶ್ ಪ್ರದೇಶದಲ್ಲಿ ನಡೆದ 'ಸಿಖ್ ವಿರೋಧಿ ದಂಗೆ' ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕ ಜನದೀಶ್ ಟೈಟ್ಲರ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ’ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
1984 ಅಕ್ಟೋಬರ್ 31ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ಮಾಡಲಾಗಿತ್ತು. ಹತ್ಯೆ ಬಳಿಕ ದೇಶದಲ್ಲಿ ಸಿಖ್ ವಿರೋಧಿ ದಂಗೆಗಳು ಭುಗಿಲೆದ್ದಿದ್ದವು. ಇಂದಿರಾ ಗಾಂಧಿ ಹತ್ಯೆಯಾದ ಮರುದಿನ(1984 ನವೆಂಬರ್ 1) ದೆಹಲಿಯ ಆಜಾದ್ ಮಾರ್ಕೆಟ್ ಬಳಿಯಿರುವ ಗುರುದ್ವಾರಕ್ಕೆ ಬೆಂಕಿ ಹಚ್ಚಲಾಗಿತ್ತು. ಸ್ಥಳದಲ್ಲಿದ್ದ ಸಿಖ್ ಸಮುದಾಯಕ್ಕೆ ಸೇರಿದ ಮೂವರಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಜಗದೀಶ್ ಟೈಟ್ಲರ್ ಪ್ರಮುಖ ಆರೋಪಿಯಾಗಿದ್ದರು.
'1984 ರ ನವೆಂಬರ್ 1 ರಂದು ಜಗದೀಶ್ ಟೈಟ್ಲರ್ ಪುಲ್ ಭಂಗಶ್ ಗುರುದ್ವಾರದ ಆಜಾದ್ ಮಾರುಕಟ್ಟೆ ಬಳಿ ನೆರೆದಿದ್ದ ಜನರನ್ನು ಪ್ರಚೋದಿಸಿದ್ದರು. ಪ್ರಚೋದಿತ ಗುಂಪು ಗುರುದ್ವಾರಕ್ಕೆ ಬೆಂಕಿಯಿಟ್ಟು ಸುಟ್ಟು ಹಾಕಿತ್ತು. ಅಲ್ಲಿದ್ದ ಸಿಖ್ ಸಮುದಾಯಕ್ಕೆ ಸೇರಿದ್ದ ಠಾಕೂರ್ ಸಿಂಗ್, ಬಾದಲ್ ಸಿಂಗ್ ಮತ್ತು ಗುರು ಚರಣ್ ಸಿಂಗ್ ಅವರನ್ನು ಕೊಲ್ಲಲಾಯಿತು’ ಎಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.
‘ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 147 (ಗಲಭೆ), 148 ಮತ್ತು 149 (ಕಾನೂನು ಬಾಹಿರವಾಗಿ ಗುಂಪು ಸೇರುವುದು), 153ಎ (ಗಲಭೆಗೆ ಪ್ರಚೋದನೆ), 109 (ಕುಮ್ಮಕ್ಕು), 302 (ಕೊಲೆ) ಹಾಗೂ 295ರ ಅಡಿಯಲ್ಲಿ ಟೈಟ್ಲರ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯವು ಜೂನ್ 2ರಂದು ಇವುಗಳ ಕುರಿತು ಪರಿಶೀಲನೆ ನಡೆಸಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.