ನವದೆಹಲಿ: ಭಾರತೀಯ ವಾಯುಪಡೆ ಮತ್ತು ನೌಕಾಪಡೆಗೆ ‘ಹಾಕ್ 115’ ಅತ್ಯಾಧುನಿಕ ಜೆಟ್ ತರಬೇತಿ (ಎಜೆಟಿ) ವಿಮಾನಗಳ ಖರೀದಿಯಲ್ಲಿ ಲಂಚ ಪಡೆದ ಆರೋಪದ ಮೇಲೆ ಬ್ರಿಟಿಷ್ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿ ರೋಲ್ಸ್ ರಾಯ್ಸ್ ಪಿಎಲ್‌ಸಿಯ ನಿರ್ದೇಶಕರು ಮತ್ತು ಶಸ್ತ್ರಾಸ್ತ್ರ ವಿತರಕರಾದ ಇಬ್ಬರು ಖಾಸಗಿ ವ್ಯಕ್ತಿಗಳ ವಿರುದ್ಧ ಸಿಬಿಐ ಭ್ರಷ್ಟಾಚಾರ ಪ್ರಕರಣ ದಾಖಲಿಸಿದೆ.
ರೋಲ್ಸ್ ರಾಯ್ಸ್ ಇಂಡಿಯಾ ನಿರ್ದೇಶಕ ಟಿಮ್ ಜೋನ್ಸ್, ರೋಲ್ಸ್ ರಾಯ್ ಪಿಎಲ್‌ಸಿ ಮತ್ತು ಬ್ರಿಟಿಷ್ ಏರೋಸ್ಪೇಸ್ ಸಿಸ್ಟಮ್ಸ್‌ನ ಶಸ್ತ್ರಾಸ್ತ್ರಗಳ ವಿತರಕರಾದ ಸುಧೀರ್ ಚೌಧರಿ ಮತ್ತು ಭಾನು ಚೌಧರಿ ವಿರುದ್ಧ ಸಿಬಿಐ ಆರು ವರ್ಷಗಳ ಪ್ರಾಥಮಿಕ ತನಿಖೆಯ ನಂತರ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ) ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದೆ.
ತರಬೇತಿ ವಿಮಾನಗಳ ಖರೀದಿ ಒಪ್ಪಂದ ಕುದುರಿಸುವಲ್ಲಿ ಈ ವ್ಯಕ್ತಿಗಳು ಮಧ್ಯವರ್ತಿ ಪಾತ್ರ ವಹಿಸಿರುವುದು ಮತ್ತು ಇವರಿಗೆ ಕಂಪನಿಯು ಕಮಿಷನ್ ನೀಡಿರುವ ಬಗ್ಗೆ ಬ್ರಿಟನ್ ನ್ಯಾಯಾಲಯ 2017ರಲ್ಲಿ ನೀಡಿದ ತೀರ್ಪಿನಲ್ಲೂ ಉಲ್ಲೇಖಿಸಿತ್ತು.
ಈ ಆರೋಪಿಗಳು 2003-12ರ ಅವಧಿಯಲ್ಲಿ ವಿಮಾನಗಳ ಖರೀದಿಯಲ್ಲಿ ಅಪರಿಚಿತ ಅಧಿಕಾರಿಗಳೊಂದಿಗೆ ಸೇರಿ ಸಂಚು ರೂಪಿಸಿರುವ ಮತ್ತು ಅಧಿಕಾರಿಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು, ಕೇಂದ್ರ ಸರ್ಕಾರಕ್ಕೆ ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ.
ಹಾಕ್ 115 ಎಜೆಟಿ 24 ವಿಮಾನಗಳನ್ನು ಸುಮಾರು ₹7,489 ಕೋಟಿಗೆ ಖರೀದಿಸಲಾಗಿತ್ತು. ಇದಲ್ಲದೆ, 42 ಹೆಚ್ಚುವರಿ ವಿಮಾನಗಳನ್ನು ಎಚ್ಎಎಲ್‌ನಲ್ಲಿ ತಯಾರಿಸಲು ಅನುಮತಿಸಿ, ತಯಾರಿಕೆ ಪರವಾನಗಿ ಶುಲ್ಕವಾಗಿ ಸುಮಾರು ₹61 ಕೋಟಿ ಮತ್ತು ಎಚ್‌ಎಎಲ್‌ಗೆ ಈ ವಿಮಾನಗಳ ತಯಾರಿಕೆ ಸಾಮಗ್ರಿ ಪೂರೈಸಲು ರೋಲ್ಸ್ ರಾಯ್ಸ್‌ಗೆ ಸುಮಾರು ₹2,546 ಕೋಟಿ ಒದಗಿಸಲಾಗಿತ್ತು.
2006-07ರಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಪರಿಶೀಲನೆಯಲ್ಲಿ ಈ ಹಗರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ರೋಲ್ಸ್ ರಾಯ್ಸ್‌ನ ಭಾರತದಲ್ಲಿನ ಕಚೇರಿಯಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಮಹತ್ವದ ಕೆಲವು ದಾಖಲೆಗಳನ್ನು ನಾಶಪಡಿಸಿರುವುದು ಕಂಡುಬಂದಿದೆ ಎಂದು ಸಿಬಿಐ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.