ನವದೆಹಲಿ (ಪಿಟಿಐ): ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ) ಉಲ್ಲಂಘನೆ ಆರೋಪದಡಿ ಸುದ್ದಿ ಪೋರ್ಟಲ್ ‘ನ್ಯೂಸ್ ಕ್ಲಿಕ್’ ವಿರುದ್ಧ ಸಿಬಿಐ ಬುಧವಾರ ಎಫ್‌ಐಆರ್ ದಾಖಲಿಸಿದೆ.
ಜತೆಗೆ, ಸಂಸ್ಥೆಯ ಸ್ಥಾಪಕರೂ ಆದ ಸಂಪಾದಕ ಪ್ರಬೀರ್ ಪುರಕಾಯಸ್ಥ ಅವರ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.
‘ಪಿಪಿಕೆ ನ್ಯೂಸ್‌ಕ್ಲಿಕ್ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್’, ಪುರಕಾಯಸ್ಥ, ‘ವರ್ಲ್ಡ್‌ವೈಡ್ ಮೀಡಿಯಾ ಹೋಲ್ಡಿಂಗ್ಸ್’ನ ವ್ಯವಸ್ಥಾಪಕ ಜೇಸನ್ ಪಿಫೆಚರ್ ಮತ್ತು ಐಟಿ ಸಲಹಾ ಸಂಸ್ಥೆ ನಡೆಸುತ್ತಿರುವ ಅಮೆರಿಕದ ನೆವಿಲ್ಲೆ ರಾಯ್ ಸಿಂಘಮ್ ಮತ್ತು ಇತರರನ್ನು ಆರೋಪಿಗಳೆಂದು ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ.
‘ನಮ್ಮ ಸಂಸ್ಥೆಯಲ್ಲಿ ಹಾಗೂ ಪುರಕಾಯಸ್ಥ ಅವರ ನಿವಾಸದಲ್ಲಿ ಸಿಬಿಐ ಶೋಧ ಮತ್ತು ಜಪ್ತಿ ಕಾರ್ಯಾಚರಣೆ ನಡೆಸುತ್ತಿದೆ. ನಮ್ಮ ಮೇಲೆ ತನಿಖೆ ನಡೆಸುತ್ತಿರುವ ಐದನೇ ಸಂಸ್ಥೆ ಇದಾಗಿದೆ’ ಎಂದು ‘ಎಕ್ಸ್’ನಲ್ಲಿ ನ್ಯೂಸ್‌ಕ್ಲಿಕ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.